Advertisement

ಶಿಕ್ಷಣ ನೀತಿ ಒಂದು ಜಾತಿ-ಧರ್ಮಕ್ಕೆ ಸೀಮಿತವಲ್ಲ :ಸಚಿವ ಡಾ. ಅಶ್ವಥ್ ನಾರಾಯಣ

06:19 PM Oct 10, 2021 | Team Udayavani |

ಬೀದರ: ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಹೊಸ ನೀತಿ ಭಾರತವೇ ಜ್ಞಾನದ ಕೇಂದ್ರವನ್ನಾಗಿಸಿ, ದೇಶವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯತ್ತ ಕೊಂಡೊಯ್ಯುವ ಉದ್ದೇಶ ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಆಶ್ವಥ್ ನಾರಾಯಣ ಸಿ.ಎಸ್. ಹೇಳಿದರು.

Advertisement

ನಗರದ ಗುರುನಾನಕ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ರವಿವಾರ ನಡೆದ ರಾಷ್ಟೀಯ ಶಿಕ್ಷಣ ನೀತಿ-೨೦೨೦ರ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಬರೀ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗಿದೆ, ಅಲ್ಪಸಂಖ್ಯಾತರಿಗೆ ವಿರೋಧವಾಗಿದೆ ಎನ್ನುವ ಅಪಾದನೆಯನ್ನು ಯಾರು ಕೂಡ ನಂಬಬಾರದು. ಹೊಸ ನೀತಿ ಜಾರಿ ನಂತರವೂ ವಿದ್ಯಾರ್ಥಿಗಳ ಶಿಷ್ಯ ವೇತನ, ಆರ್‌ಟಿಇ, ವಸತಿ ನಿಲಯ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯು ಎಲ್ಲರೂ ಸೇರಿ, ಇಡೀ ಸಮುದಾಯ ಬಲವಾಗಿ ನಂಬುವಂತಹ ಪ್ರಯತ್ನವಾಗಿದೆ. ಅಡೆತಡೆ ಇಲ್ಲದೇ ಶಿಕ್ಷಣ ಸಂಸ್ಥೆಗಳು ನಡೆದುಕೊಂಡು ಹೋಗಲು ಸಹಕಾರ ಕೊಡುವ ಪ್ರಯತ್ನವಾಗಿದೆ. ಒಬ್ಬ ವಿದ್ಯಾರ್ಥಿಯು ತನ್ನ ಆಸಕ್ತಿ ಮತ್ತು ಸಾಮರ್ಥ್ಯದ ಕ್ಷೇತ್ರದಲ್ಲಿ ಹೇಗೆ ಮುಂದುವರೆಯಬೇಕು ಎಂದು ಸಹಕಾರ ನೀಡುವ ಪ್ರಯತ್ನ, ಗುಣಮಟ್ಟ ಹೆಚ್ಚಿಸಲು ಬೇಕಾಗುವ ಎಲ್ಲ ಸ್ವಾತಂತ್ರ್ಯ ನೀಡುವ ಪ್ರಯತ್ನ ಇದಾಗಿದೆ ಎಂದರು.

ಭಾರತಕ್ಕೆ ನಮ್ಮ ಜನಸಂಖ್ಯೆಯೇ ಆಸ್ತಿಯಾಗಿದೆ. ಇಲ್ಲಿನ ನೂರಾರು ಕೋಟಿ ಜನರು ಎಲ್ಲರೂ ಗುಣಮಟ್ಟದ ಜೀವನ ನಡೆಸಲು, ಬದುಕು ಸಾರ್ಥಕತೆಯನ್ನು ಪಡೆಯಲು ಜ್ಞಾನವೇ ಮುಖ್ಯವಾಗಿದೆ. ಹೀಗಾಗಿ ವ್ಯಕ್ತಿಗಳಲ್ಲಿ ಹೊಸ ಜ್ಞಾನ ಮತ್ತು ತಿಳಿವಳಿಕೆಯನ್ನು ಮೂಡಿಸುವ ಪ್ರಯತ್ನದ ಭಾಗವಾಗಿ, ಸಮಾಜದಲ್ಲಿ ಸದೃಢತೆಯನ್ನು ತರುವ ದಾರಿಯಲ್ಲಿ ಯೋಚಿಸಿ ಹೊಸ ಶಿಕ್ಷಣ ನೀತಿ ಜಾರಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

ಇಡೀ ವಿಶ್ವದ ಜೊತೆಗೆ ನಾವೀಗ ಸ್ಪರ್ಧೆ ಮಾಡಬೇಕಿದೆ. ಎಲ್ಲರಿಗೂ ಮೀರಿದ ಶಿಕ್ಷಣದ ಕಲಿಕೆಯ ಗುಣಮಟ್ಟದ ತಿಳಿವಳಿಕೆಯನ್ನು ಪಡೆದುಕೊಳ್ಳಲು, ಶಿಕ್ಷಣ ಸಂಸ್ಥೆಗಳು ನಿಯಂತ್ರಣದಿಂದ ಹೊರಬರಲು, ಪ್ರತಿಭೆಯನ್ನು ಅನಾವರಣಗೊಳಿಸಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದರು.

Advertisement

ಕೇಂದ್ರ ಸಚಿವ ಭಗವಂತ ಖೂಬಾ ಅವರು ಮಾತನಾಡಿ, ದೇಶದ ಮೂಲೆಮೂಲೆಗಳಿಂದ ಸಲಹೆ ಪಡೆದು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಜಾರಿಯು ಅತ್ಯಂತ ಮಹತ್ವದ ಕಾರ್ಯಕ್ರಮಗಳಲ್ಲೊಂದಾಗಿದೆ ಎಂದರು.

ಎಂಎಲ್‌ಸಿ ಶಶೀಲ್ ನಮೋಶಿ ಮಾತನಾಡಿ, ಕರ್ನಾಟಕ ದೇಶದಲ್ಲಿ ಎನ್‌ಇಪಿ ಜಾರಿಗೊಳಿಸಿದ ಮೊದಲ ರಾಜ್ಯವಾಗಿದೆ. ಹೊಸ ನೀತಿ ಜಾರಿಗೆ ನಮ್ಮ ವಿವಿಗಳು ಸಿದ್ಧವಾಗಿವೆ. ಅದಕ್ಕೆ ತಕ್ಕಂತೆ ಕಲ್ಬುರ್ಗಿ ವಿವಿಯಲ್ಲಿ ನೇಮಕಾತಿ, ಮೂಲ ಸೌಕರ್ಯ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾರಂಭದಲ್ಲಿ ಶಾಸಕರಾದ ರಹೀಮ್ ಖಾನ್, ಶರಣು ಸಲಗರ, ಬುಡಾ ಅಧ್ಯಕ್ಷ ಬಾಬು ವಾಲಿ, ಹಜ್ ಸಮಿತಿಯ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲೆ, ಕಲಬುರಗಿ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ, ಗುರುನಾನಕ್ ಸಂಸ್ಥೆ ಅಧ್ಯಕ್ಷ ಡಾ. ಬಲಬೀರ್ ಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್ ಇನ್ನಿತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next