Advertisement

Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ

03:37 AM Nov 07, 2024 | Team Udayavani |

ದೇಶದ ಅತ್ಯುನ್ನತ ಗುಣಮಟ್ಟದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣವನ್ನು ಪಡೆಯಬೇಕೆಂಬ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ವಿನೂತನ ಆರ್ಥಿಕ ನೆರವಿನ ಯೋಜನೆಯೊಂದಕ್ಕೆ ತನ್ನ ಒಪ್ಪಿಗೆ ನೀಡಿದೆ.

Advertisement

ಪ್ರಧಾನಮಂತ್ರಿ ವಿದ್ಯಾಲಕ್ಷ್ಮೀ (ಪಿಎಂ ವಿದ್ಯಾಲಕ್ಷ್ಮೀ) ಯೋಜನೆಗಾಗಿ ಸರಕಾರ 3,600 ಕೋ.ರೂ.ಗಳ ಅನುದಾನವನ್ನು ಮೀಸಲಿರಿಸಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನಡಿ ಗುರುತಿಸಲಾಗಿರುವ ದೇಶದ ಅತ್ಯುನ್ನತ 860 ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅರ್ಹ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಗತ್ಯ ಹಣಕಾಸು ನೆರವು ಲಭಿಸಲಿದೆ. ಅದರಂತೆ ವಾರ್ಷಿಕ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶೈಕ್ಷಣಿಕ ಸಾಲ ಯೋಜನೆಯ ಫ‌ಲಾನುಭವಿಗಳಾಗಲಿದ್ದಾರೆ.

ದೇಶದ ಸರಕಾರಿ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಪೂರಕವಾದ ಆರ್ಥಿಕ ನೆರವು ಯೋಜನೆಗಳನ್ನು ಜಾರಿಗೆ ತರಬೇಕೆಂಬ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶಿಫಾರಸಿನ ಭಾಗವಾಗಿ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತರಲಿದೆ. ಪಿಎಂ ವಿದ್ಯಾಲಕ್ಷ್ಮೀ ಯೋಜನೆಯಡಿಯಲ್ಲಿ ಬಡ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಉನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಯಾವುದೇ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಒದಗಿಸಲಾಗುವುದು.

ಈ ಸಾಲ ಸೌಲಭ್ಯ ಅಡಮಾನ ಮತ್ತು ಜಾಮೀನುರಹಿತವಾಗಿದ್ದು, ಬಡ್ಡಿ, ಬೋಧನಾ ಶುಲ್ಕ ಮತ್ತಿತರ ಶೈಕ್ಷಣಿಕ ವೆಚ್ಚವನ್ನೆಲ್ಲ ಸರಕಾರವೇ ಭರಿಸಲಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಉನ್ನತ ಶಿಕ್ಷಣ ಪಡೆಯುವ ಹಂಬಲಕ್ಕೆ ತಿಲಾಂಜಲಿ ಇಡುವ ಲಕ್ಷಾಂತರ ಬಡ ವಿದ್ಯಾರ್ಥಿಗಳ ಪಾಲಿಗೆ ಕೇಂದ್ರ ಸರಕಾರದ ಈ ವಿನೂತನ ಉಪಕ್ರಮ ವರದಾನವಾಗಿ ಪರಿಣಮಿಸಿದೆ.

ಎನ್‌ಇಪಿ-2020 ಜಾರಿಯಾದ ಬಳಿಕ ಕೇಂದ್ರ ಸರಕಾರ ಉನ್ನತ ಶಿಕ್ಷಣ, ಕೌಶಲವರ್ಧನೆ, ಸಂಶೋಧನೆಗಾಗಿ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವಿನ ಜತೆಯಲ್ಲಿ ವಿವಿಧ ಉತ್ತೇಜನದಾಯಕ ಉಪಕ್ರಮಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಈಗ ಬಡ ಸಮುದಾಯವನ್ನೇ ದೃಷ್ಟಿಯಲ್ಲಿರಿಸಿಕೊಂಡು ಕೇಂದ್ರ ಸರಕಾರ ಪಿಎಂ ವಿದ್ಯಾಲಕ್ಷ್ಮೀ ಯೋಜನೆಯನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ದೇಶದ ಪ್ರತಿಷ್ಠಿತ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸಾಗಿಸುವುದರ ಜತೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ.

Advertisement

ಅಷ್ಟು ಮಾತ್ರವಲ್ಲದೆ ಈವರೆಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣವೇನಿದ್ದರೂ “ಉಳ್ಳವರ ಸೊತ್ತು’ ಎಂಬ ಮಾತನ್ನು ಈ ಯೋಜನೆ ಸುಳ್ಳಾಗಿಸಲಿದೆಯಲ್ಲದೆ ಈ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ ನಡೆದರೂ ಅಚ್ಚರಿಪಡಬೇಕಿಲ್ಲ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಲ್ಲಿ ಸಹಜವಾಗಿಯೇ ಹೆಚ್ಚಿನ ಆಸ್ಥೆಯಿಂದ ತಮ್ಮ ಉದ್ದೇಶಿತ ಗುರಿಯನ್ನು ಸಾಧಿಸಲು ಪಣತೊಡಲಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ನಡುವೆ ಮಾತ್ರವಲ್ಲದೆ ಶಿಕ್ಷಣಸಂಸ್ಥೆಗಳಲ್ಲೂ ಸುಧಾರಣೆಯ ಗಾಳಿ ಬೀಸಲಿರುವುದು ನಿಶ್ಚಿತ.

ಈ ಎಲ್ಲ ಧನಾತ್ಮಕ ಅಂಶಗಳು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ನೇರ್ಪುಗೊಳಿಸುವುದರ ಜತೆಯಲ್ಲಿ ನಮ್ಮ ಶಿಕ್ಷಣಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತೆ ಮಾಡಲಿದೆ. ಪಿಎಂ ವಿದ್ಯಾಲಕ್ಷ್ಮೀ ಯೋಜನೆಯ ಪ್ರಯೋಜನವನ್ನು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ಪಡೆಯುವಂತಾಗಬೇಕು.

ಈ ದಿಸೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರು ಯೋಜನೆಯ ಫ‌ಲಾನುಭವಿಗಳಾಗುವಂತೆ ಮಾಡುವ ಕಾರ್ಯವನ್ನು ಸಾಮಾಜಿಕ ಸಂಘಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮಾಡಬೇಕು. ಹೀಗಾದಲ್ಲಿ ಮಾತ್ರವೇ ಕೇಂದ್ರ ಸರಕಾರ ಬಿತ್ತಿರುವ ಬೀಜ ಮೊಳಕೆಯೊಡೆದು ಸಮೃದ್ಧ ಫ‌ಸಲು ಕೊಡಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next