ಆಳಂದ: ತಾಲೂಕಿನ ಶೈಕ್ಷಣಿಕ ಕಾರ್ಯಕ್ಕೆ ಬಂದ ಅನುದಾನವನ್ನು ಸಮರ್ಪವಾಗಿ ಬಳಸದೇ ದುರ್ಬಳಕೆ ಮಾಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಳೆದ ವರ್ಷ ಪ್ರತಿ ಶಿಕ್ಷಕರಿಗೆ ಸೇವಾ ಅವಧಿ 12 ದಿನದ ಬದಲು 5 ದಿನ ಮಾತ್ರ. ಕೆಲವೇ ಶಿಕ್ಷಕರಿಗೆ ತರಬೇತಿ ನೀಡಿ ಎಲ್ಲ ಶಿಕ್ಷಕರಿಗೆ 12 ದಿನ ತರಬೇತಿ ಕೊಟ್ಟಿದ್ದೇವೆ ಎಂದು ನಕಲಿ ದಾಖಲಾತಿ ತಯಾರಿಸಿ ಅದರ ಭತ್ಯೆ ತಿಂದು ಹಾಕಿದ್ದಾರೆ.
ಗೃಹ ಆಧಾರಿತ ಪಾಠ ಶಾಲೆಗಳು ತಾಲೂಕಿನಲ್ಲಿ ನಡೆಯುತ್ತಿವೆ ಮತ್ತು 1000(ಸಾವಿರ)ಕ್ಕಿಂತ ಹೆಚ್ಚು ವಿದ್ಯಾರ್ಥಿಗಳೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ನಕಲಿ ದಾಖಲಾತಿ ತಯಾರಿಸಿ ಹಣ ನುಂಗಿ ಹಾಕಿದ್ದಾರೆ. ಆದರೆ ತಾಲೂಕಿನಲ್ಲಿ ಎಲ್ಲಿಯೂ ಗೃಹ ಆಧಾರಿತ ಪಾಠ ಶಾಲೆಗಳು ನಡೆಯುತ್ತಿಲ್ಲ.
ಮಾಡ್ಯಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ 338 ವಿದ್ಯಾರ್ಥಿಗಳು ಇದ್ದಾರೆ. ಆದರೆ ಅಧಿಕಾರಿಗಳು 438 ಮಕ್ಕಳಿದ್ದಾರೆ ಎಂದು ಖೊಟ್ಟಿ ದಾಖಲಾತಿ ಸೃಷ್ಟಿಸಿ ಮಕ್ಕಳ ಹೆಸರಿನಲ್ಲಿ ನೋಟ್‌ಬುಕ್, ಬಟ್ಟೆ ಮತ್ತು ಬಿಸಿಯೂಟದ ಆಹಾರ ಧಾನ್ಯದ ಹಣ ತಿಂದು ಹಾಕಿದ್ದಾರೆ.
ಇನ್ನು ಅನೇಕ ಶಾಲೆಗಳಲ್ಲಿ ಇದೆ ತರ ಹೆಚ್ಚಿಗೆ ಮಕ್ಕಳ ಸಂಖ್ಯೆ ತೊರಿಸಿ ದುಡ್ಡು ತಿಂದು ಹಾಕಿದ್ದಾರೆ ಎಂದು ಆರೋಪಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ವಿಷಯ ಪರೀಕ್ಷಕ ಎಸ್.ಪಿ. ಸುಳ್ಳದ, ವಾರದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಕೊರಳ್ಳಿ, ಸಾಗರ ಹತ್ತರಕಿ, ಗಂಗಾಧರ ಕುಂಬಾರ, ಸಾಗರ ಪಾಟೀಲ, ಮಹಾಲಿಂಗಪ್ಪ ಪಟ್ಟಣಶೆಟ್ಟಿ, ಸಾಯಬಣ್ಣ ಪೂಜಾರಿ, ಶರಣು ಮೋಘಾ, ಶ್ರೀಶೈಲ ಮುಲಗೆ, ಸಿದ್ದರಾಮ ಜವಳಿ, ಅಮರ ಮೂಲಗೆ, ಕುಮಾರ ಬಂಡೆ, ಚನ್ನು ಪಾಟೀಲ, ಮಲ್ಲು ಬುಕ್ಕೆ, ಮಹೇಶ ಪಾಟೀಲ ಪಾಲ್ಗೊಂಡಿದ್ದರು.