Advertisement

Education: ಈಗ ಎಸೆಸೆಲ್ಸಿ ಪಾಸಾದವರಿಗೆ 3 ತಿಂಗಳ ಪಾಠ ನಷ್ಟ

09:11 AM Aug 26, 2024 | Team Udayavani |

ಮಂಗಳೂರು: ವಿದ್ಯಾರ್ಥಿ ಗಳ ಅನುಕೂಲಕ್ಕಾಗಿ ಈ ಬಾರಿ ಎಸೆಸೆಲ್ಸಿಯಲ್ಲಿ 3 ಪರೀಕ್ಷೆ ಮಾಡಿದ್ದು, ಅದರ ಫ‌ಲಿತಾಂಶ ಫಲಿತಾಂಶ ಸೋಮವಾರ (ಆ. 26) ಪ್ರಕಟ ಆಗಲಿದೆ. ಆದರೆ ಪಿಯು ತರಗತಿಗಳು ಜೂ.1ರಿಂದಲೇ ಆರಂಭವಾಗಿದ್ದು, 3ನೇ ಪರೀಕ್ಷೆ ಯಲ್ಲಿ ತೇರ್ಗಡೆ ಆದವರಿಗೆ ಪಿಯುಸಿಯ 3 ತಿಂಗಳ ಪಾಠ ನಷ್ಟವಾಗಲಿದೆ!

Advertisement

ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರಕಾರ ದ್ವಿತೀಯ ಪಿಯುಸಿಯಂತೆಯೇ ಎಸೆಸೆಲ್ಸಿಯಲ್ಲಿ ಇದೇ ಮೊದಲ ಬಾರಿಗೆ ಮೂರು ಪರೀಕ್ಷೆಗಳನ್ನು ನಡೆಸಿತ್ತು. ಪಿಯುಸಿಯ 3 ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಯಾವುದೇ ಸಮಸ್ಯೆಗಳಾಗಿಲ್ಲ.

ಆ.2ರಿಂದ 8ರ ವರೆಗೆ ನಡೆದ ಎಸೆಸೆಲ್ಸಿಯ ಮೂರನೇ ಪರೀಕ್ಷೆಯ ಫಲಿತಾಂಶ ಇದುವರೆಗೆ ಸಿಗದ ಕಾರಣದಿಂದ ಒಂದು ರೀತಿಯ ಗೊಂದಲದ ಪರಿಸ್ಥಿತಿ ಮೂಡಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಆದವರು ಪಿಯುಸಿಗೆ ಸೇರಿದಾಗ ಈವರೆಗೆ ಆಗಿರುವ ಪಾಠವನ್ನು ಅವರಿಗೆ ಹೇಗೆ ಮಾಡುವುದು ಎಂಬ ಪ್ರಶ್ನೆ ಉಪನ್ಯಾಸಕರದ್ದಾಗಿದೆ.

ಎಸೆಸೆಲ್ಸಿಗೆ ಹಿಂದೆ 2 ಪರೀಕ್ಷೆಗಳಿದ್ದವು. ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣ ರಾದವರಿಗೆ ಅಕ್ಟೋಬರ್‌ನಲ್ಲಿ ಮತ್ತೂಂದು ಪರೀಕ್ಷೆ ಆಗುತ್ತಿತ್ತು. ಅದರಲ್ಲಿ ಉತ್ತೀರ್ಣರಾದವರಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿ ಪ್ರವೇಶಕ್ಕೆ ಅವಕಾಶ ಇತ್ತು. ಬಳಿಕ ಅಕ್ಟೋಬರ್‌ನಲ್ಲಿ ನಡೆಯುವ ಪರೀಕ್ಷೆಯನ್ನು ಜೂನ್‌ನಲ್ಲಿ ನಡೆಸಿ ಅದರ ಫಲಿತಾಂಶದ ಆಧಾರದಲ್ಲಿ ಪಿಯುಸಿ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ವರ್ಷದಿಂದ ಸರಕಾರ 3 ಪ್ರತ್ಯೇಕ ಪರೀಕ್ಷೆ ನಡೆಸಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೈಗೊಂಡ ಈ ತೀರ್ಮಾನ ಈಗ ಅವರಿಗೇ ಸಮಸ್ಯೆ ತಂದೊಡ್ಡುವಂತಾಗಿದೆ.

ಪ.ಪೂ.ಕಾಲೇಜುಗಳ ಪ್ರಾಚಾರ್ಯರ ಸಂಘದ ದ.ಕ. ಅಧ್ಯಕ್ಷ ಜಯಾನಂದ ಎನ್‌.ಸುವರ್ಣ ಹೇಳುವ ಪ್ರಕಾರ, “ಈಗಾಗಲೇ ಪಿಯುಸಿ ಮೊದಲ ವರ್ಷದ ಮಕ್ಕಳಿಗೆ ಪಾಠಗಳು ನಡೆದು ಮೊದಲ ಪರೀಕ್ಷೆಯೂ ಆಗಿದೆ. ಇನ್ನು ಎಸೆಸೆಲ್ಸಿಯ ಫಲಿತಾಂಶ ಬಂದು, ಪ್ರವೇಶಾತಿ ಆಗಿ, ಆ ವಿದ್ಯಾರ್ಥಿಗಳು ಬರಲು ಎಷ್ಟು ಸಮಯ ಬೇಕೋ ಗೊತ್ತಿಲ್ಲ. ಅವರಿಗೆ ಆಗಿರುವ ಪಾಠ ನಷ್ಟವನ್ನು ಸರಿದೂಗಿಸುವುದು ಹೇಗೆ ಎಂಬುದೇ ಈಗ ಎದುರಿರುವ ಪ್ರಶ್ನೆ’ ಎನ್ನುತ್ತಾರೆ.

Advertisement

ದ.ಕ. 496, ಉಡುಪಿ 1008
ಎಸೆಸೆಲ್ಸಿಯ 3ನೇ ಪರೀಕ್ಷೆಗೆ ದಕ್ಷಿಣ ಕನ್ನಡದಿಂದ 496 ಹಾಗೂ ಉಡುಪಿ ಜಿಲ್ಲೆಯಿಂದ 1008 ವಿದ್ಯಾರ್ಥಿಗಳು ಹಾಜ ರಾಗಿದ್ದಾರೆ. ಇದರಲ್ಲಿ ತೇರ್ಗಡೆ ಆದವರಿಗೆ ಸರಕಾರಿ ಪಿಯು ಕಾಲೇಜುಗಳಲ್ಲಿ ಸೀಟು ಸಿಗಲಿವೆ. ಬಹುತೇಕ ಖಾಸಗಿ ಕಾಲೇಜುಗಳ ಸೀಟುಗಳು ಭರ್ತಿಯಾಗಿವೆ.

ಪಿಯು ಮೊದಲ ಪರೀಕ್ಷೆಯೂ ಪೂರ್ಣ!
ಪಿಯುಸಿಯಲ್ಲಿ ಮೊದಲ ಪರೀಕ್ಷೆ ಈಗಾಗಲೇ ಆಗಿರುವುದರಿಂದ ಹೊಸದಾಗಿ ಬರುವ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಪರೀಕ್ಷೆ ಮಾಡುವುದು ಯಾವಾಗ? ಒಂದು ವೇಳೆ ವಿಶೇಷ ತರಗತಿ ಮಾಡುವುದಾದರೂ ಅದು “ರೆಗ್ಯುಲರ್‌’ ತರಗತಿ ಯಂತೆ ವಿದ್ಯಾರ್ಥಿಗಳಿಗೆ ಅನುಕೂಲ ವಾಗಬಹುದೇ? ಯಾಕೆಂದರೆ, 2 ಬಾರಿ ಅನುತ್ತೀರ್ಣ/ಕಡಿಮೆ ಅಂಕ ಕಾರಣದಿಂದ 3 ನೇ ಪರೀಕ್ಷೆ ಬರೆದ ಕೆಲವು ಮಕ್ಕಳಿಗೆ “ವಿಶೇಷ’ ತರಗತಿ ಅನುಕೂಲ ನೀಡಲಿದೆಯೇ ಎಂಬಿತ್ಯಾದಿ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ.

ವಿಶೇಷ ತರಗತಿ ಸಾಧ್ಯತೆ
ಪಿಯು ತರಗತಿ ಜೂ.1ರಿಂದ ಆರಂಭವಾಗಿದೆ. ಎಸೆಸೆಲ್ಸಿ 3ನೇ ಫಲಿತಾಂಶ ಪ್ರಕಟವಾದ ಆದ ಬಳಿಕ ಬರುವ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗಿನ ತರಗತಿ ನಷ್ಟವನ್ನು ಯಾವ ರೀತಿ ನಿಭಾಯಿಸುವುದು ಎಂಬ ಬಗ್ಗೆ ಇಲಾಖೆ ಮಾರ್ಗದರ್ಶನ ನೀಡಲಿದೆ. ಅಂತೂ ವಿಶೇಷ ತರಗತಿ ಮೂಲಕ ಅವರಿಗೆ ಪಾಠ ಮಾಡಲು ಆದ್ಯತೆ ನೀಡಬೇಕಾಗುತ್ತದೆ.
ಸಿ.ಡಿ. ಜಯಣ್ಣ, ಡಿಡಿಪಿಯು

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next