Advertisement

ಶಿಕ್ಷಣ ಸಚಿವರೇ ಮೇಷ್ಟ್ರಾದ್ರು..ಪ್ರಶ್ನೆ ಕೇಳಿದ್ರು..

03:55 PM Dec 12, 2019 | Team Udayavani |

ಸಿದ್ದಾಪುರ: ತಾಲೂಕಿ ಹೆಗ್ಗರಣಿ ವಿವೇಕಾನಂದ ಪ್ರೌಢಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ ಕುಮಾರ ಮುಕ್ಕಾಲು ಗಂಟೆಗೂ ಅಧಿಕ ಕಾಲ ಹತ್ತನೇ ತರಗತಿ ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕರ ರೀತಿಯಲ್ಲಿ ಪ್ರಶ್ನೆ ಕೇಳಿ, ಉತ್ತರ ಪಡೆದು ಮಾರ್ಗದರ್ಶನ ಮಾಡಿದ ಅಪರೂಪದ ಸನ್ನಿವೇಶ ನಡೆಯಿತು.

Advertisement

ಸಚಿವರನ್ನು ಕಾದುನಿಂತಿದ್ದ ಎಸಿಎಂಸಿ ಪದಾಧಿಕಾರಿಗಳ, ಶಿಕ್ಷಕರ ಕೋರಿಕೆ ಮೇರೆಗೆ ಪ್ರೌಢಶಾಲೆಗೆ ಭೇಟಿ ಇತ್ತ ಸಚಿವರು ಶಾಲೆಯ ಕಟ್ಟಡ, ಪರಿಸರವನ್ನು ಗಮನಿಸಿದರು. ಗೋಡೆಗೆ ಅಳವಡಿಸಿದ್ದ ಶಾಲಾ ಕಟ್ಟಡ ಉದ್ಘಾಟನೆ ಫಲಕ ವೀಕ್ಷಿಸಿದರು. ನಂತರ ಹತ್ತನೆ ತರಗತಿಗೆ ಪ್ರವೇಶಿಸಿ ಮಾನೀಟರ್‌ ಯಾರು? ಎಂದು ವಿಚಾರಿಸಿ, ಆ ವಿದ್ಯಾರ್ಥಿಯಿಂದ ಆತ ನಿರ್ವಹಿಸಬೇಕಾದ ಕೆಲಸಗಳ ಕುರಿತು ವಿಚಾರಿಸಿದರು. ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಯಾವ ಊರಿನಿಂದ? ಎಷ್ಟು ದೂರದಿಂದ ಶಾಲೆಗೆ ಬರುತ್ತಿರುವುದು ಎಂದು ವಿಚಾರಿಸಿದರು. ನೀವು ಮುಂದೆ ಏನಾಗಬೇಕೆಂದು ನಿರ್ಧರಿಸಿದ್ದೀರಾ? ಎಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದಾಗ ಕೆಲವರು ಇಂಜೀನಿಯರ್‌ ಆಗುತ್ತೇವೆ ಎಂದರು.

 

ಗಂಡು ಮಕ್ಕಳನ್ನು ನೀವೇನು ಆಗಬೇಕೆಂದಿದ್ದೀರಿ? ಎಂದಾಗ ಬಹುಪಾಲು ಮಕ್ಕಳು ಪೊಲೀಸ್‌ ಆಗ್ತಿವಿ ಎಂದಾಗ ಸಚಿವರು ಅಚ್ಚರಿಪಟ್ಟರು. ಓದು ಮುಗಿಸಿ, ಕೃಷಿಕರಾಗಬೇಕು ಎಂದುಕೊಂಡವರು ಕೈ ಎತ್ತಿ ಎಂದಾಗ ನಾಲ್ಕು ವಿದ್ಯಾರ್ಥಿಗಳು ಕೈ ಎತ್ತಿದರು. ಅವರ ಬಳಿ ಸಾಗಿದ ಸಚಿವರು ನೀವ್ಯಾಕೆ ಕೃಷಿಕರಾಗಬೇಕು ಎಂದುಕೊಂಡಿದ್ದೀರಾ? ಎಂದಾಗ ಆ ವಿದ್ಯಾರ್ಥಿಗಳಿಂದ ದೇಶದಲ್ಲಿ ಆಹಾರದ ಕೊರತೆ ಕಂಡುಬರುತ್ತಿದೆ. ಕೃಷಿ ಕ್ಷೇತ್ರ ಕುಂಠಿತವಾಗುತ್ತಿದ್ದು ಅದನ್ನು ಅಭಿವೃದ್ಧಿಪಡಿಸಬೇಕಿದೆ. ಮುಂತಾಗಿ ಹಲವು ಉತ್ತರಗಳು ಅವರಿಂದ ಬಂದವು. ಇದರಿಂದ ಸಂತೋಷಗೊಂಡ ಸುರೇಶಕುಮಾರ ನೋಡಿ, ನಿಮ್ಮೆಲ್ಲರಲ್ಲಿ ಈ ನಾಲ್ವರು ಕೃಷಿಕರಾಗಿ ನಿಮಗೆ ಆಹಾರ ಒದಗಿಸಲಿದ್ದಾರೆ. ಅದಕ್ಕಾಗಿ ಅವರಿಗೆ ಕರತಾಡನ ಮಾಡಿ ಅಭಿನಂದಿಸಿ ಎಂದು ಅಭಿನಂದಿಸಿದರು.

ನಂತರ ವಿದ್ಯಾರ್ಥಿಗಳಲ್ಲಿ ನಿಮ್ಮ ಶಾಲಾ ಕಟ್ಟಡ ಉದ್ಘಾಟಿಸಿದವರು ಯಾರೆಂದು ಪ್ರಶ್ನಿಸಿದರು. ನೀವು ನಿತ್ಯ ನೋಡುತ್ತಿರಲ್ಲ, ಆ ಫಲಕದ ಮೇಲೆ ಹೆಸರಿದೆ, 1956ರಲ್ಲಿ ಉದ್ಘಾಟಿಸಿದ್ದು ಎಂದು ನೆನಪಿಸಿದಾಗ ಒಂದಿಬ್ಬರು ವಿರೇಂದ್ರ ಹೆಗ್ಗಡೆ ಎಂದರು. ಕೆಲವು ಕ್ಷಣದ ನಂತರ ವಿದ್ಯಾರ್ಥಿಗಳೆಲ್ಲ ರಾಮಕೃಷ್ಣ ಹೆಗಡೆ ಎಂದರು.

Advertisement

ರಾಮಕೃಷ್ಣ ಹೆಗಡೆ ಯಾರು? ಎಂದು ಮರುಪ್ರಶ್ನಿಸಿದಾಗ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಎಂದು ವಿದ್ಯಾರ್ಥಿಗಳು ಉತ್ತರಿಸಿದರು. ಆಗ ಸುರೇಶಕುಮಾರ ಅಂಥ ಪುಣ್ಯಾತ್ಮ ಈ ಶಾಲೆಯನ್ನು ಉದ್ಘಾಟಿಸಿದ್ದು ಎನ್ನುವ ಹೆಮ್ಮೆ ನಿಮ್ಮೆಲ್ಲರಲ್ಲಿ ಇರಬೇಕು. ರಾಮಕೃಷ್ಣ ಹೆಗಡೆ ನಮ್ಮ ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿ ಗಳಲ್ಲೊಬ್ಬರು. ಅಂಥ ಮಹಾನುಭಾವರು ಉದ್ಘಾಟಿಸಿದ ಶಾಲೆಯಲ್ಲಿ ನೀವು ಅಭ್ಯಾಸ ಮಾಡುತ್ತಿದ್ದೀರಿ. ಮುಂದೆ ಆ ದೊಡ್ಡವ್ಯಕ್ತಿಯ ಥರವೇ ನೀವು ಆಗಬೇಕು. ಆ ಮೂಲಕ ನೀವು ಕಲಿತ ಶಾಲೆಗೆ ಹೆಸರು ತರಬೇಕು ಎಂದು ಭಾವುಕರಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ನಂತರ ಪಾಠ, ಪ್ರವಚನದ ಬಗ್ಗೆ ಸಾಕಷ್ಟು ವಿವರಗಳನ್ನು ಪಡೆದರು. ಉಳಿದ ತರಗತಿಗಳನ್ನು ಪರಿಶೀಲಿಸಿದರು. ಶಾಲಾಡಳಿತ ಮಂಡಳಿ ಅಧ್ಯಕ್ಷ ಎನ್‌. ಆರ್‌. ಭಟ್ಟ ಧರೆ, ಜಿಪಂ ಸದಸ್ಯ ಎಂ.ಜಿ. ಹೆಗಡೆ ಗೆಜ್ಜೆ, ಡಿಡಿಪಿಐ ದಿವಾಕರ ಶೆಟ್ಟಿ, ಪ್ರಭಾರಿ ಬಿಇಒ ಜಿ.. ನಾಯ್ಕ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next