ಚನ್ನಪಟ್ಟಣ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅವಮಾನ ಮಾಡಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ವಜಾ ಹಾಗೂ ಸಚಿವ ಸುರೇಶ್‌ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದಲಿತಪರ ಸಂಘಟನೆಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ ಪ್ರತಿಭಟನೆಕಾರರು, ಶಿಕ್ಷಣ ಇಲಾಖೆ ಮತ್ತು ಸಚಿವ ಸುರೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜೀನಾಮೆಗೆ ಒತ್ತಾಯ: ಶಿಕ್ಷಣ ಇಲಾಖೆ ದುರುದ್ದೇಶದಿಂದಲೇ ಈ ರೀತಿ ಮಾಡಿದೆ. ಬಿಜೆಪಿ ಸರ್ಕಾರ ಪ್ರತಿ ಬಾರಿ ಡಾ.ಅಂಬೇಡ್ಕರ್‌ಗೆ ಅಪಮಾನ ಮಾಡುತ್ತಿದೆ. ಕೂಡಲೇ ಅಂಬೇಡ್ಕರ್ ಬಗ್ಗೆ ಅಧಿಸೂಚನೆ ಪ್ರಕಟಿಸಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮನುವಾದಿತನ ಬಹಿರಂಗ: ಮುಖಂಡ ಪಿ. ಜೆ.ಗೋವಿಂದರಾಜು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್, ವಿಶ್ವವೇ ಮೆಚ್ಚುವಂತಹ ಸಂವಿಧಾನ ವನ್ನು ದೇಶಕ್ಕೆ ನೀಡಿದ್ದಾರೆ. ಈ ಮೂಲಕ ದೇಶದ ಸರ್ವರಿಗೂ ಸಮಾನತೆ ಒದಗಿಸಿದ್ದಾರೆ. ನ.26 ರಂದು ಸಂವಿಧಾನ ದಿನವನ್ನಾಗಿ ಆಚರಿಸುವಂತೆ ಸೂಚಿಸಿರುವ ಉಮಾಶಂಕರ್ ಆದೇಶದ ಪುಟ 5, ಖಂಡಿಕೆ 2ರಲ್ಲಿ ಸಂವಿಧಾನವನ್ನು ಡಾ.ಅಂಬೇಡ್ಕರ್ ಒಬ್ಬರೇ ಬರೆದಿಲ್ಲ ಎಂದು ಅಂಬೇಡ್ಕರ್ ಅವರಿಗೆ ಅವಮಾನಿಸಿ, ಗೊಂದಲ ಸೃಷ್ಟಿಸಿ, ತಾನೊಬ್ಬ ಮನುವಾದಿ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.ಆದ್ದರಿಂದ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ದೇಶದಿಂದಲೇ ಗಡಿಪಾರು ಮಾಡಬೇಕು. ಶಿಕ್ಷಣ ಸಚಿವ ಸುರೇಶ್‌ಕುಮಾರ್ ನೈತಿಕ ಹೊಣೆ ಹೊತ್ತು, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಪಡಿಸಿದರು.
ಉಮಾಶಂಕರ್ ವಜಾಗೊಳಿಸಿ: ತಾಪಂ ಸದಸ್ಯ ಹನುಮಂತಯ್ಯ ಮಾತನಾಡಿ, ರಾಜ್ಯದ ಎಲ್ಲಶಾಲೆಗಳ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸುಳ್ಳು ಮಾಹಿತಿ ನೀಡಿ, ಡಾ.ಅಂಬೇಡ್ಕರ್ ಮೇಲಿದ್ದ ಅಪಾರ ಗೌರವಕ್ಕೆ ಧಕ್ಕೆ ತರುವ ಹುನ್ನಾರ ಇದಾಗಿದೆ. ಇದು ಮುಂದಿನ ಪೀಳಿಗೆಯನ್ನು ತಪ್ಪುದಾರಿಗೆ ಎಳೆ ಯುವ ಒಳಸಂಚಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಅಪರಾಧ. ಹೀಗಾಗಿ ಉಮಾ ಶಂಕರ್‌ರನ್ನು ಸರ್ಕಾರ ವಜಾಗೊಳಿಸಬೇಕು ಎಂದರು.
ಪ್ರತಿಭಟನೆ ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಲಾಯಿತು. ಮುಖಂಡರಾದ ಯಲಿ ಯೂರು ಜಯಕಾಂತ್, ನೀಲಸಂದ್ರ ಸಿದ್ಧರಾಮು, ಸಿದ್ಧರಾಮಯ್ಯ, ಬಿ.ಪಿ.ಸುರೇಶ್, ಅಪ್ಪಗೆರೆ ಶಿವ ಮೂರ್ತಿ, ಶ್ರೀನಿವಾಸಮೂರ್ತಿ, ಸತೀಶ್, ಸರ್ವೋತ್ತಮ್, ಬ್ಯಾಡರಹಳ್ಳಿ ಶಿವಕುಮಾರ್, ಬಾಣಗಹಳ್ಳಿ ಜಯಸಿಂಹ, ಕುಂತೂರುದೊಡ್ಡಿ ಕೇಶವಮೂರ್ತಿ, ಚಕ್ಕಲೂರು ಚೌಡಯ್ಯ, ಬಿವಿಎಸ್ ಕುಮಾರ್, ದಸಂಸ ವೆಂಕಟೇಶ್, ನೀಲಕಂಠನಹಳ್ಳಿ, ಮಂಗಳ ವಾರಪೇಟೆ ಕಿರಣ್, ಭರತ್ ಸೇರಿ ಹಲವರಿದ್ದರು.