ಅಳ್ನಾವರ: ಪ್ರಸ್ತುತ ಸಮಾಜದಲ್ಲಿ ಜ್ಞಾನದ ಜೊತೆಗೆ ವಿಜ್ಞಾನ, ಕೌಶಲಾಭಿವೃದ್ಧಿ ಗುಣ ಹೊಂದುವುದು ತೀರಾ ಅವಶ್ಯವಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಅಭ್ಯುದಯ ಸಾಧ್ಯ. ಮಕ್ಕಳು ಸಮಾಜದ ಹಾಗೂ ದೇಶದ ಆಸ್ತಿಯಾಗಿ ಬೆಳೆಯಬೇಕು ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
ಬೆಣಚಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಅನುದಾನದಡಿ ನಿರ್ಮಿಸಿದ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಮಕ್ಕಳಿಂದ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯ ಬದಲಾವಣೆಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ಮುಂದೆ ಬರಬೇಕು. ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದರು.
ಬಿಇಒ ಉಮೇಶ ಭೂಮಕ್ಕನವರ ಮಾತನಾಡಿ, ಕೋವಿಡ್ ಕಾಲದಲ್ಲಿ ಆದ ಪಾಠದ ಹಿನ್ನಡೆ ಸರಿಪಡಿಸಲು ಇಲಾಖೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಜಿಲ್ಲೆಯಲ್ಲಿ ಈ ವರ್ಷ 9ನೇ ತರಗತಿ ಪಾಸಾಗಿ 10 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ರಜೆ ನೀಡದೆ ಅಧ್ಯಯನ ಮುಂದುವರಿಸಲಾಗಿದೆ. ಮೂರು ವಿಷಯದಲ್ಲಿ ಪ್ರತಿದಿನ ಅಭ್ಯಾಸ ಬೋಧನೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಭಾರತ ಸರ್ಕಾರದ ನ್ಯೂಕ್ಲಿಯರ್ ರಿಪ್ರೇಸಿಂಗ್ ಬೋರ್ಡ್‌ನ ನಿವೃತ್ತ ಅಧಿಕಾರಿ ಎಸ್.ವಿ. ಉದಗಟ್ಟಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನದ ಮಾಹಿತಿ ಪಡೆಯಲು ಈ ಲ್ಯಾಬ್ ಸಹಕಾರಿ. ವಿಜ್ಞಾನ, ತಂತ್ರಜ್ಞಾನ, ಸಂಶೋಧನೆಗಳಿಗೆ ಇಲ್ಲಿ ವಿಶೇಷ ಆದ್ಯತೆ ಇದೆ. ತೋಟಗಾರಿಕೆ, ಕೃಷಿ, ನೃತ್ಯ, ಕಸೂತಿ ಮುಂತಾದ ವಿಭಾಗದ ಆವಿಷ್ಕಾರ ಈ ಲ್ಯಾಬ್ ನಲ್ಲಿ ಮಾಡಬಹುದು. ಮಕ್ಕಳಿಗೆ ವಿಜ್ಞಾನದ ಜೊತೆಗೆ ಜ್ಞಾನದ ಸಂಪತ್ತು ಪಡೆಯಲು ಇದು ಉತ್ತಮ ವೇದಿಕೆ ಎಂದರು.
ತಹಶೀಲ್ದಾರ್ ಅಮರೇಶ ಪಮ್ಮಾರ, ತಾಪಂ ಇಒ ಸಂತೋಷಕುಮಾರ ತಳಕಲ್, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ನ ಉತ್ತರ ಕರ್ನಾಟಕ ಭಾಗದ ಮುಖ್ಯಸ್ಥ ಕೆ.ಎಸ್. ಜಯಂತ, ಬೆಣಚಿ ಗ್ರಾಪಂ ಅಧ್ಯಕ್ಷ ಉಮೇಶ ಕದಂ, ಮುಖ್ಯಾಧ್ಯಾಪಕ ಕೆ.ಎಂ. ಶೇಖ, ಗಂಗಮ್ಮ ಮುಸ್ಟಗಿ, ಎನ್.ಜಿ. ಕಮ್ಮಾರ, ತುಕಾರಾಮ ಪಾಟೀಲ, ಎಸ್.ಎಫ್. ಸೋಜ, ಲಕ್ಷ್ಮೀ ಸಾತನೂರಿ, ಪರಶುರಾಮ ರೇಡೆಕರ, ಬಸಯ್ಯ ಹಿರೇಮಠ, ಭರತೇಶ ಪಾಟೀಲ, ಬಸವರಾಜ ಬೈಲೂರ, ಮಂಜುನಾಥ ಚೆನ್ನನವರ, ಆನಂದ ಕೆಂಚನ್ನವರ, ಮಲ್ಲನಗೌಡ ಪಾಟೀಲ ಇನ್ನಿತರರಿದ್ದರು. ಪಿ.ಬಿ. ಕಣವಿ ತಂಡದವರು ಪ್ರಾರ್ಥನಾ ಗೀತೆ ಹಾಡಿದರು.