ಮಾನ್ವಿ: ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಕೆಗೆ ಸೀಮಿತಗೊಳಿಸದೆ, ಅವರಲ್ಲಿ ಜೀವನ ಮೌಲ್ಯಗಳನ್ನು ಕಲಿಸುವುದು ಶಿಕ್ಷಣದ ಉದ್ದೇಶವಾಗಬೇಕು ಎಂದು ಪಟ್ಟಣದ ಕೋನಾಪುರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಹುಸೇನಪ್ಪ ಕುರ್ಡಿ ಹೇಳಿದರು.
ಪಟ್ಟಣದ ಪ್ರಗತಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಕಗಳನ್ನು ಪಡೆದರೆ ಮಾತ್ರ ಸಾಧನೆ ಎಂಬಂತಾಗಿದೆ. ಇದು ಸರಿಯಾದ ಮಾರ್ಗವಲ್ಲ. ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಶಿಸ್ತು, ತಾಳ್ಮೆ, ಛಲ, ಹಿರಿಯರಿಗೆ, ಗುರುಗಳಿಗೆ ಗೌರವಿಸುವ ಗುಣ, ಆತ್ಮಸ್ಥೈರ್ಯ ಸೇರಿದಂತೆ ಮಾನವೀಯ ಗುಣಗಳನ್ನು ಕಲಿಸಬೇಕು. ಅದೇ ನಿಜವಾದ ಶಿಕ್ಷಣ ಎಂದರು.
ತಂದೆ-ತಾಯಿಗಳು ಮಕ್ಕಳ ಮೇಲೆ ಅಪಾರವಾದ ನಂಬಿಕೆ, ಕನಸು ಇಟ್ಟುಕೊಂಡಿರುತ್ತಾರೆ. ಅವರು ಕಟ್ಟಿಕೊಂಡ ಕನಸುಗಳನ್ನು ಈಡೇರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಶಿಕ್ಷಣಕ್ಕೆ ಮಹತ್ವ ನೀಡುವ ಯಾವುದೆ ದೇಶ, ಕುಟುಂಬ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.
ಬಸವರಡ್ಡಿ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ. ಹೊಸಮನಿ ಬಲ್ಲಟಗಿ, ಪ್ರಾಚಾರ್ಯ ಬಸವರಾಜ ಭೋಗಾವತಿ, ಉಪನ್ಯಾಸಕಿ ಸುಮಾ ಟಿ. ಹೊಸಮನಿ ಮಾತನಾಡಿದರು. ಮುಖ್ಯೋಪಾಧ್ಯಾಯ ಹುಸೇನಪ್ಪ ಕುರ್ಡಿ ಹಾಗೂ ತಾಲೂಕಿನ ಪಕ್ಷಿಪ್ರೇಮಿ ಸಲ್ಲಾಹುದ್ದೀನ್ ರನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಉಪನ್ಯಾಸಕರಾದ ಪವನಕುಮಾರ, ರವಿ ಶರ್ಮಾ, ಶರಣಬಸವ ಕೊಕ್ಲೃಕಲ್, ರವಿಕುಮಾರ ಸುಂಕೇಶ್ವರ, ಬಂಡೆಪ್ಪ ನೀರಮಾನ್ವಿ, ಶಿವಶಂಕರ, ಕಿರಣ, ತಿರುಮಲ ಇತರರು ಇದ್ದರು.