Advertisement

ಶಿಕ್ಷಣವೇ ನಮ್ಮೆಲ್ಲರ ಆದ್ಯತೆಯಾಗಲಿ…

12:33 AM Feb 09, 2022 | Team Udayavani |

ಉಡುಪಿಯ ಕಾಲೇಜೊಂದರಲ್ಲಿ ಆರಂಭಗೊಂಡ ಹಿಜಾಬ್‌ ವಿವಾದ ಇದೀಗ ರಾಜ್ಯದ ಹಲವೆಡೆಗೆ ವ್ಯಾಪಿಸಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದು ತಮ್ಮ ಧಾರ್ಮಿಕ ಹಕ್ಕು ಎಂದು ಪ್ರತಿಪಾದಿಸಿ ಪ್ರತಿಭಟನೆಯ ಹಾದಿ ಹಿಡಿದ ಬೆನ್ನಿಗೇ ಹಿಂದೂ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರಲಾರಂಭಿಸಿದರು. ಈ ಮಧ್ಯೆ ಕೆಲವರು ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದು ವಿಚಾರಣೆ ಪ್ರಗತಿಯಲ್ಲಿದೆ. ಇದರ ಹೊರತಾಗಿಯೂ ಕಳೆದೊಂದು ವಾರದಿಂದೀಚೆಗೆ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ಕಾವೇರತೊಡಗಿವೆ.

Advertisement

ಮಂಗಳವಾರ ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ಪರ-ವಿರೋಧ ಪ್ರತಿಭಟನೆ ಎಲ್ಲೆ ಮೀರಿ ಕಲ್ಲೇಟು, ಲಘು ಲಾಠಿ ಪ್ರಹಾರ, ವಿದ್ಯಾರ್ಥಿಗಳ ಬಂಧನದ ಹಂತಕ್ಕೆ ತಲುಪಿದ್ದು ವಿಪರ್ಯಾಸ. ಯಾವುದೇ ಪ್ರತಿಭಟನೆ ಹಿಂಸಾಸ್ವರೂಪ ಪಡೆಯುವುದು ಸಹ್ಯವಲ್ಲ. ವಿದ್ಯಾರ್ಥಿಗಳೂ ಹಿಂಸೆಗೆ ಇಳಿಯುವುದು ಮತ್ತು ಆ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಲೆ ತ್ನಿಸುವುದು ಅಕ್ಷಮ್ಯ. ಒಂದು ವೇಳೆ ಪರಿಸ್ಥಿತಿ ವ್ಯತಿರಿಕ್ತಕ್ಕೆ ಹೋದ ಸಂದರ್ಭದಲ್ಲಿ ಅದನ್ನು ನಿಗ್ರಹಿಸಿ ಸಮಾಜದಲ್ಲಿ ಶಾಂತಿ ಸ್ಥಾಪಿಸಬೇಕಾ ದುದು ಆಡಳಿತ ನಡೆಸುವವರ ಪರಮ ಕರ್ತವ್ಯ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಸಂಘಟನೆಗಳ ಯೋಜಿತ ಕುತಂತ್ರಗಳು, ರಾಜಕೀಯ ಆಕಾಂಕ್ಷೆಗಳೂ ವಿವಾದವನ್ನು ದಿನೇದಿನೆ ಜಟಿಲಗೊಳಿಸುತ್ತಿರುವುದು ಸ್ಪಷ್ಟ.

ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸಿ ಇಂಥ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಬೇಕು. ಕೋವಿಡ್‌ ಕಾರಣದಿಂದ ಕಾಲೇಜುಗಳಲ್ಲಿ ಪಠ್ಯಕ್ರಮದ ಬೋಧನೆ ಅಪೂರ್ಣವಾಗಿದೆ. ಮಾರ್ಚ್‌ನಲ್ಲಿ ಎಸೆಸೆಲ್ಸಿ, ಎಪ್ರಿಲ್‌ನಲ್ಲಿ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಕೆಲವೇ ವಿದ್ಯಾರ್ಥಿ ಗಳು, ವಿದ್ಯಾರ್ಥಿನಿಯರು ತಮ್ಮ ಈ ಹೊತ್ತಿನ ಅಗತ್ಯವನ್ನು ಮರೆತಿ ರುವುದು, ಕೆಲವು ಪೋಷಕರು ಮೌನ ವಹಿಸಿರುವ ಕಾರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ವಾಸ್ತವವಾಗಿ ಇವೆಲ್ಲ ಬೆಳವಣಿಗೆಗಳಿಂದ ನಷ್ಟವಾಗುವುದು ಸ್ವತಃ ತಮಗೇ ಎಂಬು ದನ್ನು ವಿದ್ಯಾರ್ಥಿಗಳು ಮೊದಲು ಅರಿತುಕೊಳ್ಳಬೇಕು. ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ನೆಲೆಯಲ್ಲಿ ಇಂಥ ಕಾನೂನುಬಾಹಿತ ಕೃತ್ಯಗಳನ್ನು ಪೋಷಕರೂ ಬೆಂಬಲಿಸಬಾರದು.

ರಾಜ್ಯ ಸರಕಾರ, ರಾಜಕೀಯ ಪಕ್ಷಗಳು, ಸಂಘಟನೆಗಳು, ಮುಖಂಡರೂ ಆರೋಪ ಪ್ರತ್ಯಾರೋಪದಲ್ಲಿ ತೊಡಗದೇ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಮುಂದಾಗಬೇಕು. ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಸ್ಥಾಪನೆಗೆ ಆದ್ಯತೆ ನೀಡಬೇಕು. ಜಿಲ್ಲಾಡಳಿತಗಳೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು.

ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಒಂದು ಸ್ಪಷ್ಟ ಅಂಶವೆಂದರೆ ಈ ವಿವಾದದಿಂದ ಯಾರಿಗೂ ಲಾಭವಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರಿಗೆ ಮಸಿ ಬಳಿದು, ನಮ್ಮ ಭವಿಷ್ಯದ ತಲೆಮಾರು ಆತಂಕ ದಲ್ಲಿ ಕಳೆಯುವಂತೆ ಮಾಡುವ ಇಂಥ ಘಟನೆಗಳು ಸರ್ವಥಾ ಸಲ್ಲದು. ರಾಜ್ಯ ಸರಕಾರ ಕೂಡಲೇ ವಿವಾದವನ್ನು ಸೌಹಾರ್ದತೆಯಿಂದ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಿಕ್ಷಣವೇ ನಮ್ಮೆಲ್ಲರ ಆದ್ಯತೆಯಾಗಿರ ಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next