ದಾವಣಗೆರೆ: ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಶಿಸ್ತಿನ ಸಿಪಾಯಿಗಳಾಗುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ಪ್ರೊ| ಸಿ. ತಿಪ್ಪೇಸ್ವಾಮಿ ರೆಡ್ಡಿ ಸಲಹೆ ನೀಡಿದ್ದಾರೆ.
ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಚಿನ್ನಮ್ಮ ಮಹೇಶ್ವರಯ್ಯ ಪಿಯು ಕಾಲೇಜು ಸಹಯೋಗದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿ ಜೀವನದ ವ್ಯಕ್ತಿತ್ವ ವಿಕಸನ… ಕುರಿತು ಮಾತನಾಡಿದರು.
ಯಾವುದೇ ವಿದ್ಯಾರ್ಥಿಯಲ್ಲಿ ವಿನಯಶೀಲತೆ ಇಲ್ಲದಿದ್ದರೆ ವಿದ್ಯೆ ಒಲಿಯುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ವಿನಯಶೀಲತೆ ಬೆಳೆಸಿಕೊಳ್ಳಬೇಕು ಎಂದರು. ವ್ಯಕ್ತಿತ್ವ ಪ್ರತಿಯೊಬ್ಬರಲ್ಲೂ ಅರಿವು ಮತ್ತು ಜಾಗೃತಿಯನ್ನುಂಟು ಮಾಡುತ್ತದೆ. ನಯ-ವಿನಯ ಎಲ್ಲಿಯವರೆಗೂ ಕಲಿಯುವುದಿಲ್ಲವೋ ಅಲ್ಲಿಯವರೆಗೆ ಜೀವನದ ಗುರಿ ತಲುಪಲು ಸಾಧ್ಯವಿಲ್ಲ. ಸಂಸ್ಕಾರ ಹೊಂದಿದಾಗ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯವಾಗುತ್ತದೆ.
ಶರೀರ ಸದೃಢವಾಗಲು ಯೋಗ, ವ್ಯಾಯಾಮ, ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಆದರೆ, ಪ್ರಸ್ತುತ ದಿನದಲ್ಲಿ ಜಂಕ್‌ಫುಡ್‌ಗೆ ಮೊರೆ ಹೋಗುವ ವಿದ್ಯಾರ್ಥಿಗಳು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು. ಮಹಿಳಾ ಸಮಾಜದ ಅಧ್ಯಕ್ಷೆ ಕಂಚಿಕೆರೆ ಸುಶೀಲಮ್ಮ ಮಾತನಾಡಿ, ಈಗ ವಿದ್ಯಾರ್ಥಿಗಳು ಟಿವಿ, ಮೊಬೈಲ್, ಕಂಪ್ಯೂಟರ್‌ನಲ್ಲಿ ಮೈ ಮರೆತು ಓದುವುದರಲ್ಲಿ ಹಿಂದೆ ಬೀಳುತ್ತಿದ್ದಾರೆ.
ವಿದ್ಯಾರ್ಥಿಗಳಲ್ಲೇ ಓದುವ ಅಭ್ಯಾಸ ಮತ್ತು ಹವ್ಯಾಸ ದೂರವಾಗುತ್ತಿರುವುದು ಗಂಭೀರವಾಗಿ ಚಿಂತಿಸಬೇಕಾದ ವಿಚಾರ ಎಂದು ಆತಂಕ ವ್ಯಕ್ತಪಡಿಸಿದರು. ಮಹಾನ್ ವಚನಕಾರ್ತಿ ಅಕ್ಕಮಹಾದೇವಿ, ಬಸವಣ್ಣ ಮುಂತಾದವರು ಜೀವನದ ಅನುಭವವನ್ನು ವಚನದ ರೂಪದಲ್ಲಿ ತಂದಿದ್ದಾರೆ. ಕುವೆಂಪು, ದ.ರಾ.ಬೇಂದ್ರೆ, ಕಾರಂತರವರು ಈಗಿನ ಆಗುಹೋಗುಗಳ ಬಗ್ಗೆ ಪುಸ್ತಕಗಳಲ್ಲಿ ಉಲ್ಲೇಖೀಸಿದ್ದಾರೆ.
ಅಂಥಹ ಪುಸ್ತಕ ಓದುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಓದಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಿಂದಿನ ಸಿನಿಮಾ ಸಾಹಿತ್ಯದಲ್ಲಿ ಒಳ್ಳೆಯ ಸಾಹಿತ್ಯ, ವಿಚಾರ ಮೂಡಿಬರುತ್ತಿದ್ದವು. ಆದರೆ, ಈಗಿನ ಸಿನಿಮಾ ಸಾಹಿತ್ಯ ಕೇಳುವುದಕ್ಕೂ ಸಹ ಕಷ್ಟಕರವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜು ಪ್ರಾಚಾರ್ಯೆ ಎಚ್.ಎಂ. ಪುಟ್ಟಮ್ಮ ಮಹಾರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಸಾಲಿಗ್ರಾಮ ಗಣೇಶ್ ಶೆಣೈ, ಎಸ್.ಎಂ. ಮಲ್ಲಮ್ಮ, ಸದಾಶಿವಪ್ಪ, ಜಯಶೀಲ ಇತರರು ಇದ್ದರು.