ಚನ್ನರಾಯಪಟ್ಟಣ: ದೇಶದ ಅಭಿವೃದ್ಧಿಯನ್ನು ಅಲ್ಲಿನ ಶಿಕ್ಷಣ ವ್ಯವಸ್ಥೆಯ ಮೇಲೆ ನಿರ್ಧರಿಸ ಲಾಗುತ್ತದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಕೆ.ಶಾರದಾ ತಿಳಿಸಿದರು.
ಶ್ರವಣಬೆಳಗೊಳ ಹೋಬಳಿಯ ಬರಾಳು ಗ್ರಾಮದಲ್ಲಿ ಕಲ್ಪತರು ಗ್ರಾಮೀಣಾಭಿವೃದ್ಧಿ ವಿಕಾಸ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿ ಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.
ಅನಕ್ಷರಸ್ಥರ ಸಂಖ್ಯೆ ಕಡಿಮೆಯಾದರೆ ಅಂತಹ ದೇಶ ಸಮೃದ್ಧವಾಗಿರುತ್ತದೆ. ವಿದ್ಯಾವಂತರು ಉದ್ಯೋಗ ಮಾಡುವುದರೊಂದಿಗೆ ದೇಶದ ಏಳಿಗೆಗೆ ಶ್ರಮಿಸುತ್ತಾರೆ ಎಂದರು.
ಶಿಕ್ಷಣಕ್ಕೆ ಆದ್ಯತೆ ನೀಡಿ: ಪ್ರತಿ ಗ್ರಾಮದಲ್ಲಿನ ಶಾಲೆ ಯಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾಗದಂತೆ ಎಚ್ಚರ ವಹಿಸುವುದು ಇಲಾಖೆ ಹಾಗೂ ಗ್ರಾಮಸ್ಥರ ಜವಾಬ್ದಾರಿ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದ ರಿಂದ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ತಾವು ಪಾಲುದಾರರಾಗಬಹುದು. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡುವುದು ಸರ್ಕಾರ ಹಾಗೂ ಇಲಾಖೆಯ ಕರ್ತವ್ಯ ಇದಕ್ಕೆ ಪೋಷಕರು ಕೈ ಜೋಡಿಸಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ: ಶ್ರವಣ ಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಬಿ.ಆರ್. ಯುವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ವರ್ಷ ಶೂನ್ಯ ದಾಖಲಾತಿಯಿಂದ ಬರಾಳು ಗ್ರಾಮದ ಶಾಲೆ ಮುಚ್ಚಿರುವ ಸಂಗತಿ ತಿಳಿದು ಬೇಸರವಾಗಿತ್ತು, 1936ರಲ್ಲಿ ಆರಂಭವಾಗಿದ್ದ ಶಾಲೆ ಹಲವಾರು ವಿದ್ಯಾರ್ಥಿಗಳಿಗೆ ಅನುಕೂಲ ವಾಗಿತ್ತು ಇಂತಹ ಶಾಲೆಗೆ ಮಕ್ಕಳನ್ನು ದಾಖಲು ಮಾಡಬೇಕೆಂದರು.
ಪ್ರಾಥಮಿಕ ಶಾಲೆಯ ಜಿಲ್ಲಾ ಎಸ್‌ಡಿಎಂಸಿ ಅಧ್ಯಕ್ಷ ನಂದಿಪುರ ಉಮೇಶ್, ಕಲ್ಪತರು ಗ್ರಾಮೀಣಾಭಿವೃದ್ಧಿ ವಿಕಾಸ ಸಂಸ್ಥೆ ಅಧ್ಯಕ್ಷೆ ಎ.ಎಸ್.ಟಿ. ಸಾವಿತ್ರಮ್ಮ, ಕ್ರೀಡಾಪಟು ಪ್ರಕಾಶ್. ಚೈತನ್ಯ ಮಾತನಾಡಿದರು. ಗ್ರಾಮದ ಮುಖಂಡ ನಾಗಣ್ಣ, ಶಿಕ್ಷಣ ಸಂಯೋಜಕ ಚಿದಾನಂದ್, ನಿತ್ಯಾನಂದ್, ಶ್ರವಣೇರಿ ಕ್ಲಸ್ಟರ್ ಸಿಆರ್‌ಪಿ ಸತೀಶ್, ಬರಾಳು ಶಾಲೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
•ಪ್ರತಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾಗದಂತೆ ಪೋಷಕರು ಎಚ್ಚರ ವಹಿಸಿ
•ವಿದ್ಯಾವಂತರು ಉದ್ಯೋಗ ಮಾಡುವುದರೊಂದಿಗೆ ದೇಶದ ಅಭಿವೃದ್ಧಿ ಸಾಧ್ಯ