Advertisement

ವಿದ್ಯಾಭ್ಯಾಸ ವನವಾಸಕ್ಕೆ ಕೊನೆಗೂ ಮುಕ್ತಿ

05:56 PM Sep 20, 2022 | Team Udayavani |

ಯಾದಗಿರಿ: ಬಂದಳ್ಳಿ ಏಕಲವ್ಯ ವಸತಿ ಶಾಲೆ ಮಕ್ಕಳ ವಿದ್ಯಾಭ್ಯಾಸದ ವನವಾಸಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.

Advertisement

ಜನಪ್ರತಿನಿಧಿಗಳ ಪ್ರತಿಷ್ಠೆಯಿಂದ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ರದ್ದಾಗಿದ್ದರಿಂದ ಮಕ್ಕಳು ಸ್ವಂತ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರಿಂದ ಸ್ವಂತ ಕಟ್ಟಡದಲ್ಲಿಯೇ ಪಾಠ ಮಾಡುವಂತಾಗಿದೆ.

ಬಂದಳ್ಳಿ ಏಕಲವ್ಯ ವಸತಿ ಶಾಲೆ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ 2021ರ ಅ.9ರಂದು ಆಯೋಜಿಸಲಾಗಿತ್ತು. ಉದ್ಘಾಟನೆಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆಗಮಿಸಿದ್ದರು. ಮಕ್ಕಳು-ಹಾಸ್ಟೆಲ್‌ ಸಿಬ್ಬಂದಿ ಇಡೀ ಕಟ್ಟಡವನ್ನು ಮಧುವಣಗಿತ್ತಿಯಂತೆ ಶೃಂಗರಿಸಿ ಸಂಭ್ರಮದಲ್ಲಿದ್ದರು. ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ತಗಾದೆ ತೆಗೆದಿದ್ದರಿಂದ ವಸತಿ ಶಾಲೆ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ರದ್ದುಗೊಂಡಿತ್ತು. ಇದರಿಂದ ಬಂದಳ್ಳಿಯಿಂದ 40 ಕಿ.ಮೀ ದೂರದ ಬೇವಿನಳ್ಳಿ ಮೊರಾರ್ಜಿ ವಸತಿ ಶಾಲೆ ಕಟ್ಟಡದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇತ್ತು. ಕಟ್ಟಡ ಲೋಕಾರ್ಪಣೆಗೊಳ್ಳದಿದ್ದರೂ ಪರವಾಗಿಲ್ಲ ಮಕ್ಕಳು ಓದಲಿಕ್ಕೆ ಅನುಕೂಲ ಮಾಡಿಕೊಡಿ ಎಂದು ಹೋರಾಟಗಾರ ಮರೆಪ್ಪ ನಾಯಕ ಮಗದಂಪೂರ ಸಚಿವರು, ಅಧಿಕಾರಿಗಳಿಗೆ ಪತ್ರ ಬರೆದು ಪರಿಸ್ಥಿತಿ ಮನವರಿಕೆ ಮಾಡಿದ್ದರಿಂದ ಜಿಲ್ಲಾಡಳಿತ ಮತ್ತು ಇಲಾಖೆ ಅಧಿಕಾರಿಗಳು ಮಕ್ಕಳಿಗೆ ಸ್ವಂತ ಕಟ್ಟಡದಲ್ಲಿಯೇ ಅನುಕೂಲ ಕಲ್ಪಿಸಿದ್ದಾರೆ.

ಚಿಂಚನಸೂರ ವಾದವೇನು?: ಚಿಂಚನಸೂರ ಶಾಸಕರಾಗಿದ್ದ ಸಮಯದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಏಕಲವ್ಯ ವಸತಿ ಶಾಲೆಯನ್ನು ಗುರುಮಠಕಲ್‌ ಕ್ಷೇತ್ರಕ್ಕೆ ತರಲಾಗಿತ್ತು. ಆದರೆ ಅದರ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸದೇ ಅಧಿಕಾರಿಗಳು ಅವಮಾನ ಮಾಡಿದ್ದಾರೆಂದು ಖಂಡಿಸಿ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ರದ್ದುಗೊಳಿಸಲೇಬೇಕು ಎಂದು ಹಠ ಹಿಡಿದಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರನ್ನು ಹಾಗೆಯೇ ಕಳುಹಿಸಿದ್ದರು. ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ರಾಜಕೀಯ ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಬಂದಳ್ಳಿ ಏಕಲವ್ಯ ವಸತಿ ಶಾಲೆಯ ಸ್ವಂತ ಕಟ್ಟಡದಲ್ಲಿಯೇ ವಿದ್ಯಾಭ್ಯಾಸ ಮಾಡಲು ಮಕ್ಕಳಿಗೆ ಸಿಕ್ಕಂತಾಗಿದೆ.

ರಾಜಕೀಯ ಪ್ರತಿಷ್ಠೆ ಬಿಟ್ಟು ಬಂದಳ್ಳಿ ಏಕಲವ್ಯ ವಸತಿ ಶಾಲೆ ಆರಂಭಿಸಬೇಕಿತ್ತು. ದುರದೃಷ್ಟವಶಾತ್‌ ಹೋರಾಟ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕಾಗಿ ಬಂತು. ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಹಲವು ಬಾರಿ ಪತ್ರ ಬರೆದು ಒತ್ತಾಯಿಸಿದ್ದರಿಂದ ಜಿಲ್ಲಾಡಳಿತ ಯಾವುದೇ ರಾಜಕೀಯ ಪ್ರಭಾವಕ್ಕೊಳಗಾಗದೇ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿರುವುದು ಸಂತೋಷ. -ಮರೆಪ್ಪ ನಾಯಕ ಮಗದಂಪೂರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರು, ಯಾದಗಿರಿ

Advertisement

-ಮಹೇಶ ಕಲಾಲ

Advertisement

Udayavani is now on Telegram. Click here to join our channel and stay updated with the latest news.

Next