Advertisement

ಹಳ್ಳಿಗಳ ಅಭಿವೃದ್ಧಿಗೆ ಶಿಕ್ಷಣ ಅಗತ್ಯ

09:46 PM Aug 16, 2019 | Team Udayavani |

ಚಿಕ್ಕಬಳ್ಳಾಪುರ: ಸರ್ವ ರೀತಿಯಲ್ಲಿ ಹಳ್ಳಿಗಳ ಶ್ರೇಯೋಭಿವೃದ್ಧಿಯಾಗಬೇಕಾದರೆ ಅದು ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಪ್ರತಿಯೊಂದು ಮನೆಯ ಮಗುವು ವಿದ್ಯಾವಂತನಾದರೆ ಆ ಮನೆಯ ಏಳಿಗೆಯಾಗುತ್ತದೆ. ಪ್ರತಿಯೊಂದು ಮನೆಯ ಏಳಿಗೆಯಾದರೆ ಇಡೀ ಉರೇ ಉದ್ಧಾರವಾಗುತ್ತದೆ ಎಂದು ಆದಿಚುಂಚಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.

Advertisement

ನಗರದ ಹೊರ ವಲಯದ ಸೊಲಾಲಪ್ಪನ ದಿನ್ನೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಗ್ರಾಮೀಣ ಮಕ್ಕಳ ಶೈಕ್ಷಣಿಕಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಡು ಬಡವರಿಂದ ಕೂಡಿದ ಶೈಕ್ಷಣಿಕವಾಗಿ ಹಿಂದುಳಿದ ಕುಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಮಕ್ಕಳನ್ನು ಶೈಕ್ಷಣಿಕವಾಗಿ ಮೇಲೆತ್ತುವ ದೃಷ್ಟಿಯಿಂದ ರೂಪಿಸಿರುವ ಶ್ರೀ ಆದಿಚುಂಚನಗಿರಿ ವಿದ್ಯಾವಿಕಾಸ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೂಜ್ಯರ ಆಶಯ: ಚಿಕ್ಕಬಳ್ಳಾಪುರ ತಾಲೂಕಿನ ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಹಳ್ಳಿಯ ಪ್ರತಿಯೊಂದು ಮನೆಗೂ ಶೈಕ್ಷಣಿಕ ಜ್ಯೋತಿಯನ್ನು ಹಚ್ಚುವ ಕಾರ್ಯವನ್ನು ಪೂಜ್ಯರ ಆಶಯದಂತೆ ಆದಿಚುಂಚನಗಿರಿ ಮಠ ಕೈಗೆತ್ತಿಕೊಂಡಿದೆ. ಅದಕ್ಕೆ ತಮ್ಮೆಲ್ಲೆರ ಸಹಕಾರ ಅತ್ಯಗತ್ಯ. ಯಾವುದೇ ಜಾತಿ ಮತ ಭೇದವಿಲ್ಲದೇ ಸರ್ವರು ಈ ಯೋಜನೆಯಡಿಯಲ್ಲಿ ಶಿಕ್ಷಣ ಪಡೆದುಕೊಂಡು ಪ್ರತಿಯೊಂದು ಮಗುವು ಒಂದು ಶಕ್ತಿಯಾಗಿ ಬೆಳೆಯಬೇಕೆಂದರು. ಮೂರನೇ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಹಿರಿಯ ನ್ಯಾಯಾಧೀಶೆ ಭಾನುಮತಿ ಮಾತನಾಡಿ, ಸ್ವಾಮೀಜಿಯವರು ಶೈಕ್ಷಣಿಕವಾಗಿ ಹಿಂದುಳಿದಿರುವ ಗ್ರಾಮಗಳನ್ನು ವಿದ್ಯಾವಿಕಾಸ ಯೋಜನೆಯಡಿ ಗುರುತಿಸಿರುವುದು ನಿಮ್ಮ ಸೌಭಾಗ್ಯ.

ನಿಮ್ಮ ಆಸೆ ನಿಜವಾಗಲಿದೆ: ಶೈಕ್ಷಣಿಕವಾಗಿ ಹಿಂದುಳಿದಿರುವ ಹಳ್ಳಿ ಮಕ್ಕಳಿಗೆ ಈ ಯೋಜನೆಯು ಬಹಳ ಉಪಯುಕ್ತವಾಗಿದ್ದು, ಕೂಲಿ ಮಾಡಿ ಬದುಕು ಸಾಗಿಸುತ್ತಿರುವ ಹಳ್ಳಿಯ ಪ್ರತಿಯೊಂದು ಮನೆಯಲ್ಲಿಯೂ ಮುಂದೊಂದು ದಿನ ಒಬ್ಬ ತಹಶೀಲ್ದಾರ್‌, ಜಿಲ್ಲಾಧಿಕಾರಿ, ಸಬ್‌ಇನ್‌ಸ್ಪೆಕ್ಟರ್‌, ಶಿಕ್ಷಕರು, ಇಂಜಿನಿಯರ್‌ ಮುಂತಾದವರನ್ನು ಕಾಣುವ ನಿಮ್ಮ ಆಸೆ ನಿಜವಾಗಬಹುದು ಎಂದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್‌.ನಾರಾಯಣಸ್ವಾಮಿ ಮಾತನಾಡಿ, ಈ ಯೋಜನೆಯ ಅಡಿಯಲ್ಲಿ ನಮ್ಮ ಹಳ್ಳಿಯನ್ನು ಗುರುತಿಸಿರುವುದು ನಮ್ಮಲ್ಲರ ಭಾಗ್ಯ. ಈ ಉಪಯೋಗವನ್ನು ಪ್ರತಿಯೊಂದು ಮಗುವು ಸದುಪಯೋಗ ಪಡೆದುಕೊಂಡು ಉನ್ನತ ಹಂತ ತಲುಪಿ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು. ಇಂತಹ ಯೋಜನೆಯನ್ನು ಕಲ್ಪಿಸದ್ದಕ್ಕಾಗಿ ನಮ್ಮೂರಿನ ಗ್ರಾಮಸ್ಥರೆಲ್ಲರೂ ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಬೇಕೆಂದರು.

Advertisement

100 ಮಕ್ಕಳು ವಿದ್ಯಾಭ್ಯಾಸ: ಆದಿಚುಂಚನಗಿರಿ ವಿದ್ಯಾವಿಕಾಸ ಯೋಜನೆಯ ಅಡಿಯಲ್ಲಿ ಅಗಲಗುರ್ಕಿ ಗ್ರಾಮದ 1 ರಿಂದ 10ನೇ ತರಗತಿಯ 100ಕ್ಕೂ ಹೆಚ್ಚು ಮಕ್ಕಳು ವಿದ್ಯಾರ್ಜನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜಿಎಸ್‌ ಅಗಲಗುರ್ಕಿ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ಕುಮಾರ್‌ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಕ್ಕಳನ್ನೇ ಆಸ್ತಿಯಾಗಿಸಿ: ಆಧುನಿಕ ಜಗತ್ತಿನಲ್ಲಿ ಶಿಕ್ಷಣವೇ ಶಕ್ತಿಯಾಗಿದ್ದು, ಪೋಷಕರು ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲು ಸದೃಢರನ್ನಾಗಿ ಮಾಡಬೇಕೆಂದು ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್‌.ಶಿವರಾಮರೆಡ್ಡಿ ಸಲಹೆ ನೀಡಿದರು.

ಆದಿಚುಂಚನಗಿರಿ ವಿದ್ಯಾ ವಿಕಾಸ ಯೋಜನೆಯಡಿ ನಡೆಯುವ ಪಾಠ, ಪ್ರವಚನ, ಭಜನೆ ಹಾಗೂ ಸುಸಂಸ್ಕೃತರನ್ನಾಗಿಸಲು ನಡೆಯುವ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳನ್ನು ಕಳುಹಿಸಿ ಸಹಕರಿಸಬೇಕೆಂದು ಪೋಷಕರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next