Advertisement

ಆರ್ಥಿಕ, ಸಾಮಾಜಿಕ ಪ್ರಗತಿಗೆ ಶಿಕ್ಷಣ ಪ್ರಮುಖ ಸಾಧನ

07:16 AM Jun 27, 2019 | Team Udayavani |

ಹನೂರು: ತಾಲೂಕಿನ ಹೆಚ್ಚಿನ ಗ್ರಾಮಗಳು ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಬಹುಪಾಲು ಜನರು ಬಡತನದಿಂದ ಜೀವನ ಸಾಗಿಸುತ್ತಿದ್ದಾರೆ. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿಯತ್ತ ಕೊಂಡೊಯ್ಯಲು ಶಿಕ್ಷಣ ಒಂದೇ ಪ್ರಮುಖ ಸಾಧನ ಎಂಬುದನ್ನು ತಿಳಿದು, ಬಡಜನರ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಪಂ ಅಧ್ಯಕ್ಷ ಸಿ.ಮುನಿರಾಜು ತಿಳಿಸಿದರು.

Advertisement

ತಾಲೂಕಿನ ಮಂಚಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿದ ಅವರು ಮಾತನಾಡಿ, ಹನೂರು ಕ್ಷೇತ್ರವು ವಿಸ್ತಾರವಾದ ಕ್ಷೇತ್ರವಾಗಿದ್ದು, ಇಲ್ಲಿ ಗುಡ್ಡಗಾಡು ಮತ್ತು ಅರಣ್ಯದಂಚಿನ ಗ್ರಾಮಗಳೇ ಹೆಚ್ಚಾಗಿವೆ. ಇಲ್ಲಿನ ಜನತೆ ಬಹುಪಾಲು ಮಳೆಯನ್ನೇ ಆಶ್ರಯಿಸಿದ್ದ ಸಕಾಲದಲ್ಲಿ ಮಳೆಯಾಗದ ಹಿನ್ನೆಲೆ ಗುಳೆ ಹೋಗುವಂತಹ ಪರಿಸ್ಥಿತಿಯಿದೆ. ಶೈಕ್ಷಣಿಕ ಪ್ರಗತಿಗೆ ತೊಡಕು ಉಂಟಾಗುತ್ತಿದೆ ಎಂದರು.

1.5 ಲಕ್ಷ ಪುಸ್ತಕ ವಿತರಣೆ: ಯಾವುದೇ ಒಂದು ಪ್ರದೇಶ ಅಭಿವೃದ್ಧಿಯಾಗಬೇಕಾದಲ್ಲಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಬಹುಮುಖ್ಯ ಪಾತ್ರವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವ ದೃಷ್ಟಿಯಿಂದ ಮತ್ತು ಬಡಜನರಿಗೆ ನೆರವಿನ ಹಸ್ತ ಚಾಚುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ 1.5 ಲಕ್ಷ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ರಾಮಾಪುರ, ಪಳನಿಮೇಡು, ಅಂಬಿಕಾಪುರ ಗ್ರಾಮಗಳ ಶಾಲೆಗಳಿಗೆ ವಿತರಿಸಲಾಗಿದ್ದು, ಹೂಗ್ಯಂ, ಮಆರ್ಟಳ್ಳಿ, ದಿನ್ನಳ್ಳಿ ಭಾಗದ ಗ್ರಾಮಗಳಿಗೂ ತೆರಳಿ ವಿತರಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಣಕ್ಕೆ ಸರ್ಕಾರದಿಂದ ಅನುದಾನ: ಬಡತನ ವಿದ್ಯಾಭ್ಯಾಸಕ್ಕೆ ಯಾವುದೇ ಕಾರಣಕ್ಕೂ ಹಿನ್ನೆಡೆಯನ್ನುಂಟು ಮಾಡಬಾರದು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಅನುದಾನವನ್ನು ನೀಡುತ್ತಿವೆ. ಜೊತೆಗೆ ಹಲವು ಸ್ವಯಂ ಸೇವಾ ಸಂಘಗಳು, ದಾನಿಗಳೂ ಕೂಡ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ದೊರಕುವಂತಹ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜದ ಸತ್ಪ್ರಜೆಗಳಾಗಬೇಕು. ಈ ಮೂಲಕ ತಂದೆ ತಾಯಿಗೆ, ಗುರುಗಳಿಗೆ, ಗ್ರಾಮಕ್ಕೆ ಹೆಸರು ತರುವಂತಾಗಬೇಕು. ಶಿಕ್ಷಕರೂ ಕೂಡ ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳು ಎಂದೇ ಭಾವಿಸಿ ಉತ್ತಮ ಶಿಕ್ಷಣ ನೀಡಿ ಸನ್ನಡತೆ ಕಲಿಸಬೇಕು ಎಂದು ಕಿವಿಮಾತು ಹೇಳಿದರು.

Advertisement

ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜು, ರಾಮಾಪುರ ಪಂಚಾಕ್ಷರಿ, ಅಶ್ವಥ್‌ ನಾರಾಯಣ್‌, ಶಿವಣ್ಣ, ಗಿರೀಶ್‌, ಆಕಾಶ್‌, ಪ್ರಸಾದ್‌, ಅಶ್ವಥ್‌, ಶಾಲೆಯ ಮುಖ್ಯ ಶಿಕ್ಷಕ ನಟರಾಜಾಚಾರಿ, ಶಿಕ್ಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next