Advertisement

ಗುಡಿಸಲಲ್ಲಿ ಬೆಳೆದ ಪ್ರತಿಭೆಗೆ ಶಿಕ್ಷಣ ಇಲಾಖೆೆ ಗೌರವ

12:24 PM May 04, 2019 | Team Udayavani |

ಕಮತಗಿ: ತಗಡಿನ ಶೆಡ್‌ದಲ್ಲಿ ಬೆಳೆದ ಪ್ರತಿಭೆಯ ಅಪೂರ್ವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಎಸ್ಸೆಸ್ಸೆಲ್ಸಿ ಪ್ರತಿಭೆಯನ್ನು ಗೌರವಿಸಿ ಪ್ರೋತ್ಸಾಹಿಸಿದರು.

Advertisement

ಕಮತಗಿಯ ಶಂಕ್ರಪ್ಪ ಹಡಪದ ಅವರ ಪುತ್ರಿ ಮತ್ತು ಬಾಗಲಕೋಟೆಯ ಪ್ರತಿಭಾನ್ವಿತ ಪ.ಜಾ/ಪ.ಪಂ. ಬಾಲಕಿಯರ ಸರ್ಕಾರಿ ವಸತಿ ಶಾಲೆ ವಿದ್ಯಾರ್ಥಿನಿ ಸತ್ಯವತಿ ಹಡಪದ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 (ಶೇ.98.56) ಅಂಕಗಳನ್ನು ಪಡೆದು ಜಿಲ್ಲೆಗೆ 3ನೇ ಸ್ಥಾನ ಪಡೆದಿದ್ದಾಳೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್. ಗೋನಾಳ ಅವರು ಸತ್ಯವತಿ ಹಡಪದ ಶೆಡ್‌ಗೆ ಭೇಟಿ ನೀಡಿ ಶಾಲು ಹೊದಿಸಿ, ಹೂವಿನ ಹಾರ ಹಾಕಿ, ಸಿಹಿ ತಿನಿಸಿ ಗೌರವಿಸಿದರು.

ಈ ವೇಳೆ ಡಿಡಿಪಿಐ ಬಿ.ಎಚ್. ಗೋನಾಳ ಮಾತನಾಡಿ, ಕಷ್ಟ ಪಟ್ಟು ಓದಿ ಇಲಾಖೆ ಮತ್ತು ತಂದೆ-ತಾಯಿಗಳ ಕೀರ್ತಿಯನ್ನು ಹೆಚ್ಚು ಮಾಡಿದ ನಿನ್ನ ಪ್ರತಿಭೆ ಕಮರಬಾರದು. ಮುಂದಿನ ವ್ಯಾಸಂಗಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಇಲಾಖೆಯಿಂದ ನೀಡಲಾಗುವುದು. ಅದರ ಸದುಪಯೋಗ ಪಡೆದು ಯಶಸ್ಸಿನ ಸಾಧನೆ ಮುಂದುವರಿಯಬೇಕು. ನಿನ್ನಲ್ಲಿರುವ ಕ್ರಮಬದ್ಧವಾದ ಓದಿನ ರುಚಿ ಕಡಿಮೆ ಮಾಡಿಕೊಳ್ಳದೇ ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದು ವಿದ್ಯಾರ್ಥಿನಿಗೆ ಸೂಚಿಸಿದರು.

ಸಾಧಕ ವಿದ್ಯಾರ್ಥಿನಿ ಸತ್ಯವತಿ ಹಡಪದ ಮಾತನಾಡಿ, ವಸತಿ ಶಾಲೆಯಲ್ಲಿದ್ದುಕೊಂಡು ಉತ್ತಮವಾಗಿ ಅಭ್ಯಾಸ ಮಾಡಿದ ಪರಿಣಾಮದಿಂದ ಈ ರೀತಿಯ ಸಾಧನೆಗೆ ಕಾರಣವಾಗಿದೆ. ಪಾಲಕರ, ಶಿಕ್ಷಕರ ಪ್ರೋತ್ಸಾಹ ಸಾಕಷ್ಟು ಸಿಕ್ಕಿದೆ. ಪಿಯುಸಿ ನಂತರ ಐ.ಎ.ಎಸ್‌ ಅಧ್ಯಯನ ಮಾಡುವ ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದರು. ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ ಮಾತನಾಡಿದರು. ಬಾಲಕಿಯರ ಸರ್ಕಾರಿ ವಸತಿ ಶಾಲೆಯ ಮುಖ್ಯಶಿಕ್ಷಕ ಎಲ್.ಎ. ಬಿರಾದಾರ, ಶಂಕ್ರಪ್ಪ ಹಡಪದ, ಗಂಗಪ್ಪ ಭೂತಲ, ರಾಘವೇಂದ್ರ ಕಿರಸೂರ, ಶಿವಕುಮಾರ ಹಡಪದ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next