Advertisement

ಅನಧಿಕೃತ ಶುಲ್ಕ ವಸೂಲಿಗೆ ಶಿಕ್ಷಣ ಇಲಾಖೆ ಕಡಿವಾಣ

04:22 PM May 26, 2023 | Team Udayavani |

ಕುಂದಾಪುರ: ಖಾಸಗಿ ಶಾಲೆ ಗಳಲ್ಲಿ ಅನಧಿಕೃತವಾಗಿ, ಸರಕಾರದ ನಿಯಮ ಮೀರಿ ಶುಲ್ಕ ವಸೂಲಿ ಮಾಡುವ ಕ್ರಮಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಾಲೆಗಳಲ್ಲಿ ಶುಲ್ಕದ ವಿವರ ಪ್ರದರ್ಶಿಸಲು ಸೂಚಿಸಿದೆ.

Advertisement

ಕುಂದಾಪುರ ಶೈಕ್ಷಣಿಕ ವಲಯದಲ್ಲಿ 228 ಶಾಲೆಗಳಿದ್ದವು. ಈ ಪೈಕಿ 209 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. 15 ಕ್ಲಸ್ಟರ್‌ಗಳಿವೆ. ಕುಂದಾಪುರ ಕ್ಲಸ್ಟರ್‌ನಲ್ಲಿ 10, ಅಲಾºಡಿ ಆರ್ಡಿ 16, ಅಮಾಸೆಬೈಲು 13, ಅಂಪಾರು 16, ಬಿದ್ಕಲ್‌ಕಟ್ಟೆ 13, ಗಂಗೊಳ್ಳಿ 14, ಹಾಲಾಡಿ 10, ಹುಣ್ಸೆಮಕ್ಕಿ 11, ಕೆದೂರು 11, ಕೋಣಿ 18, ಕೋಟೇಶ್ವರ 17, ಶಂಕರನಾರಾಯಣ 10, ಸಿದ್ದಾಪುರ 21, ತೆಕ್ಕಟ್ಟೆ 12, ವಡೇರಹೋಬಳಿ 17 ಶಾಲೆಗಳಿವೆ.

ಅನುದಾನಿತ, ಅನುದಾನ ರಹಿತ
45 ಸ.ಕಿ.ಪ್ರಾ., 76 ಸ.ಹಿ.ಪ್ರಾ., 20 ಸರಕಾರಿ ಪ್ರೌಢಶಾಲೆಗಳು, 17 ಅನುದಾನಿತ ಹಿ.ಪ್ರಾ.ಶಾಲೆಗಳು, 7 ಅನುದಾನಿತ ಪ್ರೌಢಶಾಲೆಗಳು, 1 ಅನುದಾನಿತ ಪಿಯುಸಿ, ಅನುದಾನ ರಹಿತ 1 ಕಿರಿಯ ಪ್ರಾಥಮಿಕ, 10 ಹಿರಿಯ ಪ್ರಾಥಮಿಕ, 20 ಪ್ರೌಢಶಾಲೆಗಳು, 8 ಪಿಯು ಕಾಲೇಜುಗಳು ಇವೆ. ಸಮಾಜ ಕಲ್ಯಾಣ ಇಲಾಖೆಯ 4 ಶಾಲೆಗಳಿವೆ. ಒಟ್ಟು 46 ಕಿರಿಯ ಪ್ರಾಥಮಿಕ, 103 ಹಿರಿಯ ಪ್ರಾಥಮಿಕ, 51 ಪ್ರೌಢಶಾಲೆಗಳು, 9 ಪಿಯು ಕಾಲೇಜುಗಳು ಇವೆ.

ಅಂಕಗಳ ಬೆನ್ನತ್ತಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅತ್ಯಧಿಕ ಅಂಕಗಳ ವಿದ್ಯಾರ್ಥಿಗಳ ಸೇರ್ಪಡೆಗೆ ಆದ್ಯತೆ ನೀಡಿ ಅವರ ಮೂಲಕ ದೊರೆತ ಶೇ.100 ಫ‌ಲಿತಾಂಶ ಹಾಗೂ ರ್‍ಯಾಂಕ್‌ಗಳ ಆಮಿಷವನ್ನು ಪಾಲಕರಿಗೆ ತೋರಿಸುತ್ತವೆ. ಅಂಕ ಗಳಿಕೆ ಎಂಬ ಮಾಯಾ ಮರೀಚಿಕೆಯ ಬೆನ್ನು ಬೀಳುವ ಪಾಲಕರು ಅತೀ ಹೆಚ್ಚು ಫ‌ಲಿತಾಂಶ ಬರುವ ಶಾಲಾ ಕಾಲೇಜನ್ನೇ ಆಯ್ಕೆ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡುವ ಕೆಲವು ಶಿಕ್ಷಣ ಸಂಸ್ಥೆಗಳು ವಸೂಲಿಗಿಳಿಯುತ್ತವೆ.

ಡೊನೇಶನ್‌
ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲಿ ಡೊನೇಶನ್‌ ಹೆಸರಿನಲ್ಲಿ ಅನಧಿಕೃತ ಶುಲ್ಕ ವಸೂಲಿ ಪಾಲಕರಿಗೆ ದೊಡ್ಡ ತಲೆನೋವಾಗಿದೆ. ಸೀಟು ಭರ್ತಿ, ಕಲಿಕಾ ಗುಣಮಟ್ಟ, ಅಂಕಗಳಿಕೆಯಲ್ಲಿ ಮುಂದೆ, ಫ‌ಲಿತಾಂಶದಲ್ಲಿ ದಾಖಲೆ ಇತ್ಯಾದಿಗಳನ್ನು ತೋರಿಸಿ ಭರ್ಜರಿ ಡೊನೇಶನ್‌ ಪಡೆಯುವ ಸಂಸ್ಥೆಗಳು ರಾಜ್ಯದಲ್ಲಿ ಅನೇಕ ಇವೆ. ಕೆಜಿ ತರಗತಿಗಳಿಂದ ಕಾಲೇಜಿನವರೆಗೂ ಲಕ್ಷಾಂತರ ರೂ. ಪಡೆಯಲಾಗುತ್ತದೆ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕೂಡ ಇದಕ್ಕಿಂತ ಕಡಿಮೆ ಶುಲ್ಕದಲ್ಲಿ ಲಭ್ಯವಿದೆ. ರಸೀದಿ ನೀಡಿ, ರಸೀದಿ ಇಲ್ಲದೇ, ನಗದು ಮಾತ್ರ ಹೀಗೆ ಬೇರೆ ಬೇರೆ ರೀತಿ ಹಣ ಪಡೆಯಲಾಗುತ್ತದೆ. ಹಾಸ್ಟೆಲ್‌ ಶುಲ್ಕ ಪ್ರತ್ಯೇಕ.

Advertisement

ಕೋಚಿಂಗ್‌ ದಂಧೆ
ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಬರುವಂತೆ ಮಾಡಲು ಕೋಚಿಂಗ್‌ ನೀಡಲಾಗುತ್ತದೆ. ಶಾಲಾ ಕಾಲೇಜಿನ ಸಾರ್ವತ್ರಿಕ ಶಿಕ್ಷಣ ಅಲ್ಲದೇ ಪ್ರತ್ಯೇಕ ಕೋಚಿಂಗ್‌ ಹೆಸರಿನಲ್ಲೂ ಶುಲ್ಕ ಪಡೆಯಲಾಗುತ್ತದೆ. ಕೆಲವು ಶಾಲೆ, ಕಾಲೇಜು ಗಳಲ್ಲಿ ಇದನ್ನು ಕಡ್ಡಾಯ ಮಾಡಲಾಗುತ್ತದೆ. ಕೆಲವೆಡೆ ಆಯ್ಕೆಗೆ ಬಿಡಲಾಗುತ್ತದೆ.

ಸರಕಾರಿ ಶಾಲೆಗಳು
ಖಾಸಗಿಯಲ್ಲಿ ದಾಖಲಾತಿ, ಪ್ರವೇಶ ಶುಲ್ಕ, ಕೋಚಿಂಗ್‌, ಹಾಸ್ಟೆಲ್‌, ಬಸ್‌, ಯೂನಿಫಾರಂ, ಶೂ ಎಲ್ಲ ಸೇರಿಸಿದರೆ ಸಣ್ಣ ಸಣ್ಣ ತರಗತಿಗೇ ಲಕ್ಷಾಂತರ ರೂ. ಆಗುತ್ತದೆ. ಅದೇ ಸರಕಾರಿ ಶಾಲೆಗಳು ಒಬ್ಬ ವಿದ್ಯಾರ್ಥಿಗೇ ಲಕ್ಷಾಂತರ ರೂ. ಸರಕಾರವೇ ವ್ಯಯಿಸಿ ಉಚಿತ ಶಿಕ್ಷಣ ನೀಡುತ್ತವೆ. ಹಾಗಿದ್ದರೂ ಖಾಸಗಿಯೆಡೆಗಿನ ಆಕರ್ಷಣೆ ತಡೆಯಲು ಸರಕಾರಿ ಶಾಲೆಗಳಿಗೆ ಸಾಧ್ಯವಾಗಲಿಲ್ಲ. ಖಾಸಗಿ ಶಾಲೆಗಳಿಗೆ ಸೇರಲು ಆರ್‌ಟಿಇ ಮೂಲಕ ಸರಕಾರವೇ ಅವಕಾಶ ಕೊಟ್ಟಿದೆ.

ತಡೆಗೆ ಕ್ರಮ
ಖಾಸಗಿ ಶಾಲೆಗಳಲ್ಲಿ ಮಿತಿಮೀರಿದ ಡೊನೇಶನ್‌ ಹಾವಳಿ ತಡೆಯಲು ಸರಕಾರ ಸ್ಪಷ್ಟ ಸೂಚನೆ ನೀಡಿದೆ. ಪಡೆಯುವ ಶುಲ್ಕದ ವಿವರನ್ನು ದೊಡ್ಡ ಫ‌ಲಕಗಳಲ್ಲಿ ಅಳವಡಿಸಬೇಕು, ಪಾಲಕರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ. ಅದರಂತೆ ಕುಂದಾಪುರದ ಕೆಲವು ಶಾಲೆಗಳಲ್ಲಿ ಈಗಾಗಲೇ ಫ‌ಲಕ ಹಾಕಲಾಗಿದೆ. ಪಾಲಕರಿಗೂ ಮುದ್ರಿತ ಪ್ರತಿ ನೀಡಲಾಗುತ್ತಿದೆ. ಇದರ ಹೊರತಾಗಿ ಶುಲ್ಕ ಪಡೆದರೆ ಶಿಕ್ಷಣ ಇಲಾಖೆಗೆ ದೂರು ನೀಡುವಂತೆಯೂ ಸೂಚಿಸಲಾಗಿದೆ.

ಫ‌ಲಿತಾಂಶಕ್ಕೆ ಮುನ್ನ ಭರ್ತಿ
ಕೆಲವೇ ವರ್ಷಗಳ ಹಿಂದಿನವರೆಗೂ ಎಸೆಸೆಲ್ಸಿ, ಏಳನೇ ಮೊದಲಾದ ತರಗತಿಯ ಫ‌ಲಿತಾಂಶ ಬಂದ ಬಳಿಕವಷ್ಟೇ ಮುಂದಿನ ತರಗತಿಗೆ ಅಥವಾ ಬೇರೆ ಶಾಲೆಗೆ ಸೇರ್ಪಡೆ ಮಾಡಲಾಗುತ್ತಿತ್ತು. ಈಚಿನ ವರ್ಷಗಳಲ್ಲಿ ಎಪ್ರಿಲ್‌, ಮೇ ತಿಂಗಳಲ್ಲಿ ಫ‌ಲಿತಾಂಶ ಬರುವುದಾದರೂ ಜನವರಿ ತಿಂಗಳಿನಿಂದಲೇ ದಾಖಲಾತಿ ನಡೆದು ಭರ್ತಿಯಾಗಿರುತ್ತವೆ.

ಪ್ರದರ್ಶನಕ್ಕೆ ಸೂಚನೆ
ಶಿಕ್ಷಣ ಎಲ್ಲರ ಹಕ್ಕು. ಅದರಿಂದ ಯಾರೂ ವಂಚಿತರಾಗಬಾರದು. ಎಲ್ಲ ಶಾಲೆಗಳಿಗೂ ಅವರು ಪಡೆಯುವ ಶುಲ್ಕದ ಸ್ಪಷ್ಟ ಮಾಹಿತಿಯನ್ನು ಪ್ರದರ್ಶಿಸಲು ಸೂಚಿಸಲಾಗಿದೆ. ಅನೇಕ ಶಾಲೆಗಳಲ್ಲಿ ಈ ಕ್ರಮ ಅಳವಡಿಕೆಯಾಗಿದೆ.
-ಕಾಂತರಾಜು ಸಿ.ಎಸ್‌.,
ಕ್ಷೇತ್ರ ಶಿಕ್ಷಣಾಧಿಕಾರಿ

-ಲಕ್ಷ್ಮೀ ಮಚ್ಚಿನ

 

Advertisement

Udayavani is now on Telegram. Click here to join our channel and stay updated with the latest news.

Next