Advertisement
ಹೌದು, ಶಾಲಾ ಶೈಕ್ಷಣಿಕ ಪ್ರವಾಸವನ್ನು ಕಡ್ಡಾಯವಾಗಿ ಕೆಎಸ್‌ಆರ್‌ಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ವಾಹನಗಳಲ್ಲಿ ಮಾತ್ರ ತೆರಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ಹಾಗು ಖಾಸಗಿ ವಾಹನಗಳಲ್ಲಿ ಶಾಲಾ ಶೈಕ್ಷಣಿಕ ಪ್ರವಾಸ ಮಾಡಬಾರದೆಂದು ಶಿಕ್ಷಣ ಇಲಾಖೆ ಆಯುಕ್ತರು ಶಾಲೆಗಳ ಮುಖ್ಯ ಶಿಕ್ಷಕರಿಗೆ ಮಹತ್ವದ ಸುತ್ತೋಲೆ ಹೊರಡಿಸಿ ಆದೇಶಿಸಿದೆ.
Related Articles
Advertisement
ಡಿಸೆಂಬರ್ ಒಳಗೆ ಪ್ರವಾಸ ಮುಗಿಸಬೇಕು: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕು, ಯಾವುದೇ ಕಾರಣಕ್ಕೂ ಡಿಸೆಂಬರ್ ಬಳಿಕ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳದಂತೆ ರಾಜ್ಯದ ಎಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಶೈಕ್ಷಣಿಕ ಪ್ರವಾಸದ ಕುರಿತು ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವ ರಾಜ್ಯದ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ.ಕಾವೇರಿ, ಪೋಷಕರ ಒಪ್ಪಿಗೆ ಇರುವ ಮಕ್ಕಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕೆರೆದೊಯ್ಯವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ದುಬಾರಿ ಶುಲ್ಕ ವಸೂಲಿ ಆರೋಪ: ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಡಿಸೆಂಬರ್ ಪ್ರವೇಶಕ್ಕೆ ಕೇವಲ ದಿನಗಳು ಬಾಕಿ ಇವೆ. ಇದರ ನಡುವೆ ಪ್ರವಾಸದ ಹೆಸರಲ್ಲಿ ಕೆಲ ಖಾಸಗಿ ಹಾಗೂ ಅನುದಾನಿತ ಶಾಲೆಗಳು ಮಕ್ಕಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆಯೆಂಬ ಆರೋಪ ಕೇಳಿ ಬರುತ್ತಿವೆ. ಕೆಲ ಮಕ್ಕಳ ಪೋಷಕರು ಪ್ರವಾಸಕ್ಕೆ ಸುತಾರಂ ಒಪ್ಪದೇ ಇದ್ದರೂ ಪ್ರವಾಸಕ್ಕೆ ಕಳುಹಿಸುವಂತೆ ಪೋಷಕರ ಮೇಲೆ ಆಡಳಿತ ಮಂಡಳಿಗಳು ಒತ್ತಡ ತರುತ್ತಿವೆ.
-ಕಾಗತಿ ನಾಗರಾಜಪ್ಪ