Advertisement

ಶಿಕ್ಷಣ ಇಲಾಖೆ ಎಡವಟ್ಟು: ಇನ್ನೂ ಹೋರಾಟ ಬೇಡ

09:27 PM Nov 16, 2019 | Lakshmi GovindaRaju |

ಮೈಸೂರು: ನ.26ರಂದು ಶಾಲೆಗಳಲ್ಲಿ ಸಂವಿಧಾನ ದಿನಾಚರಣೆ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ್ದ ಕೈಪಿಡಿಯಲ್ಲಿ ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ಪ್ರಶ್ನಾರ್ಥಕ ವಿಚಾರಗಳನ್ನು ಮುದ್ರಿಸಿರುವ ಬಗ್ಗೆ ಇಲಾಖೆ ವಿಚಾರಣೆ ನಡೆಸಿ, ತಪ್ಪಾಗಿದೆ ಎಂಬ ಕಾರಣಕ್ಕೆ ಮೂವರು ಅಧಿಕಾರಿಗಳನ್ನು ಅಮಾನತುಮಾಡಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯೇ ಕ್ಷಮಾಪಣೆ ಕೇಳಿದ್ದಾರೆ.

Advertisement

ಹೀಗಾಗಿ ಹೋರಾಟ ಬೇಡ, ಈ ವಿಚಾರವನ್ನು ಇಲ್ಲಿಗೆ ಬಿಡಿ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಮನವಿ ಮಾಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣರಾಜ್ಯ ಭಾರತಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕೊಡುಗೆ ಅಪಾರ.

ನ.26ಕ್ಕೆ ಸಂವಿಧಾನವನ್ನು ಒಪ್ಪಿ 70 ವರ್ಷ, ಆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರತಂದಿರುವ ಕೈಪಿಡಿಯಲ್ಲಿ ಗೊಂದಲಗಳು, ಪ್ರಶ್ನಾರ್ಹ ವಿಚಾರಗಳಿದ್ದುದರಿಂದ ವಿರೋಧ, ಪ್ರತಿಭಟನೆಗಳು ವ್ಯಕ್ತವಾಗುತ್ತಿದೆ. ಅಂಬೇಡ್ಕರ್‌ಗೂ ನಮಗು ತಾಯಿ-ಮಗುವಿನಂತೆ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಅಂಬೇಡ್ಕರ್‌ ವಿಚಾರ ಬಂದ ಕೂಡಲೇ ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದೇವೆ. ಉದ್ರೇಕಕ್ಕೆ ಒಳಗಾಗುವ ಬದಲು ಅಂಬೇಡ್ಕರ್‌ ಅವರನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಎಂದರು.

ಸ್ಪಷ್ಟನೆ: ಅಂಬೇಡ್ಕರ್‌ ಹೇಗೆ ಸಂವಿಧಾನ ಬರೆದರು ಎಂಬುದು ಇಡೀ ರಾಷ್ಟ್ರಕ್ಕೆ ಗೊತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಸಂವಿಧಾನದ ಬಗ್ಗೆ ಚರ್ಚೆಗಳಾಗುತ್ತವೆ ಎಂಬ ಮಾತಿದೆ. ಸಂವಿಧಾನದ ಬಗ್ಗೆ ಮಾತನಾಡಿದ್ದ ಸಂಸದ ಅನಂತಕುಮಾರ್‌ ಹೆಗಡೆ, ಗೋ.ಮಧುಸೂದನ್‌ ಕೂಡ ಸಂವಿಧಾನದ ಬಗ್ಗೆ ಮಾತನಾಡಿದ್ದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಉಡುಪಿಯಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದಾಗ ನಿಮಗೆ ಧರ್ಮದ ವಿಚಾರ ಮಾತ್ರ ಗೊತ್ತು. ಸಂವಿಧಾನದ ಬಗ್ಗೆ ಮಾತನಾಡಬೇಡಿ ಎಂದು ಹೇಳಿದ್ದೆ, ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಸಂವಿಧಾನವೇ ನಮ್ಮ ಸರ್ವ ಶ್ರೇಷ್ಠ ಗ್ರಂಥ ಅಂದು ಚರ್ಚೆಗೆ ತೆರೆ ಎಳೆದಿರುವಾಗ ಗೊಂದಲಗಳೇಕೆ ಎಂದು ಪ್ರಶ್ನಿಸಿದರು.

Advertisement

ಕಾರ್ಯದರ್ಶಿ ಕ್ಷಮಾಪಣೆ: ಶಿಕ್ಷಣ ಇಲಾಖೆ ಖಾಸಗಿ ಸಂಸ್ಥೆಗೆ ಕೈಪಿಡಿ ಮಾಡುವ ಜವಾಬ್ದಾರಿವಹಿಸಿ ತಪ್ಪು ಮಾಡಿದೆ. ಶಿಕ್ಷಣ ಇಲಾಖೆ ನಿರ್ದೇಶಕರು ಆಯುಕ್ತರ ಗಮನಕ್ಕೆ ತಂದ ನಂತರ ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕಿತ್ತು. ಆದರೆ, ನೇರವಾಗಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

ಹೀಗಾಗಿ ತಪ್ಪಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಷಮಾಪಣೆ ಕೇಳಿ, ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಈ ಬಗ್ಗೆ ನಾನು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಜತೆ ಕೂಡ ಮಾತನಾಡಿದ್ದೇನೆ. ಇಲ್ಲಿ ಸಚಿವರ ಬೇಜವಾಬ್ದಾರಿತನ ಕಾಣಿಸಲ್ಲ, ಉದ್ದೇಶಪೂರ್ವಕವಾಗಿ ಯಾರೂ ಮಾಡಿಲ್ಲ, ಹೀಗಾಗಿ ಈ ವಿಚಾರದಲ್ಲಿ ಇನ್ನು ಹೋರಾಟ ಬೇಡ ಎಂದು ಮನವಿ ಮಾಡಿದರು.

ಇಷ್ಟು ಹೇಳಿದ ಮೇಲೂ ಹೋರಾಟ ಮಾಡುತ್ತೇವೆ ಎನ್ನುವವರು ಮೊಸರಲ್ಲಿ ಕಲ್ಲು ಹುಡುಕುವವರು, ಅದಕ್ಕೇನು ಮಾಡೋಕಾಗಲ್ಲ. ಅಂಬೇಡ್ಕರ್‌ ಬಗ್ಗೆ ಯಾರೂ ಉದ್ವೇಗಕ್ಕೆ ಒಳಗಾಗಬೇಡಿ, ಸಂವಿಧಾನ ತಿದ್ದುಪಡಿಗೆ ಅಂಬೇಡ್ಕರ್‌ ಅವರೇ ಅವಕಾಶ ಮಾಡಿಕೊಟ್ಟಿದ್ದಾರೆ. ತಿದ್ದುಪಡಿ ಮಾಡುವುದರಿಂದ ಚಿನ್ನಕ್ಕೆ ಹೊಳಪು ಬಂದಂತಾಗುತ್ತೆ ಹೊರತು, ಸಂವಿಧಾನ ದುರ್ಬಲವಾಗಲ್ಲ ಎಂದು ತಿಳಿಸಿದರು.

ಜನಾದೇಶ ಪ್ರಶ್ನಿಸಲು ನೀವ್ಯಾರು?: ಪ್ರಜಾಪ್ರಭುತ್ವದಲ್ಲಿ ಅವರವರ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ. ಇಷ್ಟಕ್ಕೂ ಬಿಜೆಪಿ ಅಧಿಕಾರಕ್ಕೆ ನಾಮ ನಿರ್ದೇಶನದಿಂದ ಬಂದಿಲ್ಲ. ಜನಾದೇಶ ಪಡೆದು ಬಂದಿದೆ. ಜನಾದೇಶ ಪಡೆದು ಅಧಿಕಾರಕ್ಕೆ ಬಂದಿರುವವರನ್ನು ಪ್ರಶ್ನಿಸಲು ನೀವ್ಯಾರು, ನಿಮ್ಮ ಅಭಿಪ್ರಾಯ ತಿಳಿಸಲು ಮುಂದಿನ ಚುನಾವಣೆಯಲ್ಲಿ ಅವಕಾಶವಿದೆ ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next