Advertisement

ಶಿಕ್ಷಣ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತದೆ: ಡಾ. ಕೊಟ್ಟೂರು ಮಹಾಸ್ವಾಮಿ

02:22 PM Aug 22, 2022 | Team Udayavani |

ಗಂಗಾವತಿ: ಶಿಕ್ಷಣವು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ನೆರವಾಗುತ್ತದೆ ಎಂದು ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು ಹೇಳಿದರು.

Advertisement

ಅವರು ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದಲ್ಲಿ ವಾರ್ಷಿಕ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜ್ಞಾನ ಸಶಕ್ತವಾದದ್ದು ಅದು ಕೊಡುವ ಬಲದಿಂದ ವ್ಯಷ್ಟಿ ಹಾಗೂ ಸಮಷ್ಟಿಯ ಅಜ್ಞಾನದ ತಮಂಧತೆಯನ್ನು ದೂರ ಮಾಡಿ ವಿವೇಕದ ಬೆಳಕನ್ನು ಮೂಡಿಸಬಹುದು. ಜ್ಞಾನದ ಬೆಳಕಲ್ಲಿ ಸಾಗಿದಾಗ ಲೋಕ ಸುಜ್ಞಾನಗೊಳ್ಳುತ್ತದೆ. ವಿದ್ಯಾರ್ಥಿನಿಯರು ಪದವಿಯೊಂದಿಗೆ ತಮ್ಮ ಜ್ಞಾನವನ್ನು ವಿವೇಕವನ್ನು ಉದ್ದೀಪಿಸಿಕೊಂಡು ಸಮಾಜಕ್ಕೆ ಬೆಳಕಾಗಬೇಕು ಎಂದರು.

ಕೇಂದ್ರ ಯುವಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವೀರಣ್ಣ ಮಡಿವಾಳರ ಮಾತನಾಡಿ, ವಿದ್ಯಾರ್ಥಿನಿಯರು ಪರಿಶ್ರಮದಿಂದ ಓದಿದರೇ ಖಂಡಿತ ಯಶಸ್ಸು ಪಡೆಯಬಹುದು.ಸಮಾಜದಲ್ಲಿ ಅನೇಕ ವಿದ್ಯಾರ್ಥಿಗಳು ಕಡುಬಡತನದಲ್ಲಿಯೇ ಓದಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಉದಾಹರಣೆಗಳಿವೆ.  ಕಷ್ಟಗಳಿಗೆ ಕೊರಗದೆ ಛಲದಿಂದ ಮುನ್ನುಗ್ಗಿದಾಗ ಮಾತ್ರ ಸಾಧನೆ ನಮ್ಮದಾಗುತ್ತದೆ. ಪದವಿಯೊಂದಿಗೆ ಸಂಸ್ಕಾರ ಬೆಳಸಿಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ಬಿ.ಎ ಮತ್ತು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ  ಬಿಳ್ಕೋಡುಗೆ ಮಾಡಿ ಹರಸಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Advertisement

ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಕಲ್ಮಠ ಮಹಿಳಾ ಕಾಲೇಜು ಮಹಿಳಾ ಉನ್ನತ ಶಿಕ್ಷಣಕ್ಕೆ ಆದರ್ಶದ ನೆಲೆಯಾಗಿದೆ. ಕಾಲೇಜಿನಲ್ಲಿ ಓದಿದ ನೂರಾರು ವಿದ್ಯಾರ್ಥಿನಿಯರು ಇಂದು ದೇಶ, ವಿದೇಶಗಳಲ್ಲಿ ಬದುಕು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸರ್ವತೋಮುಖ ವಿಕಾಸಕ್ಕೆ ಪೂರಕವಾದ ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಾಗುತ್ತದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಕೆ. ಚನ್ನಬಸಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶರಣೇಗೌಡ ಮಾಲೀಪಾಟೀಲ ಕಾಲೇಜು ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಸಹಕಾರ್ಯದರ್ಶಿ ಹೆಚ್.ಎಂ.ಮಂಜುನಾಥ ವಕೀಲರು, ಸದಸ್ಯರಾದ ಹೊಸಳ್ಳಿ ದೊಡ್ಡರಾಮಲಿಂಗಪ್ಪ .ವಿದ್ಯಾರ್ಥಿನಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ, ಸಹಕಾರ್ಯದರ್ಶಿ ಸುಷ್ಮಾ ಉಪಸ್ಥಿತರಿದ್ದರು. ಅಧ್ಯಾಪಕರಾದ ನಂದಿನಿ ಸಿದ್ದಾಪುರ, ಡಾ.ಶಾರದಾ ಪಾಟೀಲ, ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next