Advertisement

ಬಳ್ಳಕ ಅಂಗನವಾಡಿಯ ಮಕ್ಕಳಿಗೆ “ಟ್ಯಾಬ್‌’ಮೂಲಕ ಶಿಕ್ಷಣ

04:39 PM Apr 03, 2018 | |

ಸುಬ್ರಹ್ಮಣ್ಯ : ಈ ಅಂಗನವಾಡಿಗೆ ಬರಲು ಮಕ್ಕಳು ಹಿಂದೇಟು ಹಾಕುವುದಿಲ್ಲ, ರಚ್ಚೆ ಹಿಡಿದು ಅಳುವುದಿಲ್ಲ. ಆಧುನಿಕ ಶೈಲಿಯಲ್ಲಿ ಶಿಕ್ಷಣ ನೀಡುತ್ತಿರುವ ಈ ಕೇಂದ್ರವೀಗ ಎಲ್ಲರ ಗಮನ ಸೆಳೆಯುತ್ತಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲಿ ಅಂಗನವಾಡಿ ಕೇಂದ್ರವಿದೆ. ಪಂಜ – ಗುತ್ತಿಗಾರು ರಸ್ತೆಯ ಒಳಗಿನ ಕಾಡಿನ ಮಧ್ಯೆ ಜನವಸತಿ ವಿರಳವಿರುವಲ್ಲಿ ಇದು ಕಾರ್ಯಾಚರಿಸುತ್ತಿದೆ. ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಅಂಗನವಾಡಿ ಕೇಂದ್ರವಿದು. ನಗರದ ಆಂ.ಮಾ. ಶಾಲೆ ಗಳಲ್ಲೂ ಇಲ್ಲದಿರುವ ವ್ಯವಸ್ಥೆಗಳು ಇಲ್ಲಿವೆ.

Advertisement

 ಇಲ್ಲಿ ಈ ಹಿಂದೆ ಸರಕಾರಿ ಶಾಲೆ ಕಟ್ಟಡದ ಜತೆ ಅಂಗನವಾಡಿ ಕೇಂದ್ರವಿತ್ತು. ಬಳಿಕ ಸರಕಾರದ ಅನು ದಾನದ ಜತೆಗೆ ಊರಿನ ದಾನಿಗಳು, ಪೋಷಕರು ಮತ್ತು ಸಂಘ – ಸಂಸ್ಥೆಗಳ ನೆರವಿನಿಂದ 14 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ನೆಲಕ್ಕೆ ಟೈಲ್ಸ್‌ ಹಾಸಿದ ಕೇಂದ್ರದಲ್ಲಿ 14 ಹೆಣ್ಣು ಮಕ್ಕಳು, ಆರು ಗಂಡು ಮಕ್ಕಳ ಸಹಿತ 20 ಮಕ್ಕಳು ಇದ್ದಾರೆ. ಸಿಸಿ ಕೆಮರಾ, ಹವಾನಿಯಂತ್ರಕ, ವಿದ್ಯುತ್‌ ಪಂಪ್‌, ನೀರಿನ ಟ್ಯಾಂಕ್‌, ಪಾತ್ರೆ, ಬೀರು, ಕಪಾಟು, ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರುಬಂಡಿ, ಆಟಿಕೆಗಳು, ಪಾತ್ರೆಗಳು, ಗಡಿಯಾರ, ಮಣ್ಣಿನ ಮಡಕೆ, ಎಲ್‌ಸಿಡಿ ಪ್ರಾಜೆಕ್ಟರ್‌, ಮರದ ಮೇಜು-ಕುರ್ಚಿ, ಎಲ್ಲ ಮಕ್ಕಳಿಗೂ ಬೇಬಿ ಚೇರ್‌, ಪೋಷಕರಿಗೆ ಕುರ್ಚಿಗಳು, ಅಕ್ವೇರಿಯಂ, ಸೋಲಾರ್‌, ಅರೆಯುವ ಕಲ್ಲು, ಮಿಕ್ಸರ್‌ ಗ್ರೆçಂಡರ್‌, ಫ್ಯಾನ್‌, ಕಂಚಿನ ದೀಪ – ಯಾವ ಕೊರತೆಯೂ ಇಲ್ಲದಂತೆ ಇಲ್ಲಿ ಸೊತ್ತು, ಸೌಲಭ್ಯಗಳಿವೆ. ಕೊಡುಗೆ ರೂಪದಲ್ಲಿ 4 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳು ಅಂಗನವಾಡಿಗೆ ಲಭಿಸಿವೆ.

ಗೋಡೆಯಲ್ಲಿ ಕಲಿಕೆಗೆ ಸಹಕಾರಿಯಾಗುವ ಕಲಾತ್ಮಕ ಕೃತಿಗಳನ್ನು ರಚಿಸಲಾಗಿದೆ. ತರಕಾರಿ ತೋಟ, ಸಾವಯವ ಹಣ್ಣುಹಂಪಲು, ಗಿಡಮರಗಳ ಚಿತ್ರ ಸಹಿತ ಪಟ್ಟಿ, ಸ್ವಾತಂತ್ರÂ ಹೋರಾಟಗಾರರು, ರಾಷ್ಟ್ರೀಯ ಹಬ್ಬಗಳು, ಪೂಜಾ ಸಾಮಗ್ರಿಗಳು, ನಾದಸ್ವರಗಳು, ಪ್ರಸಿದ್ಧ ಆಟಗಳು, ಸಂಪರ್ಕ ಸಾಧನಗಳು, ವಾಹನಗಳ ಹೆಸರು ಮತ್ತು ಚಿತ್ರಗಳನ್ನು ಗೋಡೆಗಳಲ್ಲಿ ಅಂದವಾಗಿ ರಚಿಸಲಾಗಿದೆ. ವ್ಯಾಯಾಮ ಭಂಗಿಗಳು, ಯೋಗ, ಧ್ಯಾನದ ಚಿತ್ರಗಳನ್ನು ರಚಿಸಿ, ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸುವ ಪ್ರಯತ್ನ ಇಲ್ಲಿ ನಡೆದಿದೆ. ಶಾಲಾ ಆವರಣದಲ್ಲಿ ಸುಂದರ ಹೂದೋಟ ನಿರ್ಮಿಸಲಾಗಿದೆ. 

ಹೂವಿನ ಗಿಡಗಳು ಹಾಗೂ ಬಾಳೆಗಿಡಗಳನ್ನು ನೆಡಲಾಗಿದೆ. ತೆಂಗಿನ ಸಸಿ, ಮಾವು, ಚಿಕ್ಕು, ನಿಂಬೆಹಣ್ಣು, ಸೀಬೆ, ಪಪ್ಪಾಯಿ, ನೆಲ್ಲಿ ಜತೆ ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ. ಎರಡು ಪ್ರತ್ಯೇಕ ಶೌಚಾಲಯಗಳಿವೆ. ಕೇಂದ್ರ ಹಾಗೂ ಮಕ್ಕಳ ಸ್ವತ್ಛತೆ ಕಡೆಗೂ ಗಮನಹರಿಸ ಲಾಗಿದೆ. ಎಲ್ಲ ಮಕ್ಕಳಿಗೂ ಸಮವಸ್ತ್ರ ನೀಡಲಾಗಿದ್ದು, ಕನ್ನಡ, ಹಿಂದಿ,ಇಂಗ್ಲಿಷ್‌ ಭಾಷೆಗಳಲ್ಲಿ ಕಲಿಸಲಾಗುತ್ತಿದೆ.

ಟ್ಯಾಬ್‌ ಮೂಲಕ ಶಿಕ್ಷಣ ಮಕ್ಕಳ ಹೆತ್ತವರು, ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಸಂಘ-ಸಂಸ್ಥೆಗಳು, ದಾನಿಗಳು ಹಾಗೂ ಕೇಂದ್ರದ ಕಾರ್ಯಕರ್ತೆ, ಸಿಬಂದಿ, ಬಾಲವಿಕಾಸ ಸಮಿತಿ, ಕಟ್ಟಡ ಸಮಿತಿಯವರ ಕಾಳಜಿಯಿಂದ ಇಲ್ಲೊಂದು ಸುಸಜ್ಜಿತ ಅಂಗನವಾಡಿ ಕೇಂದ್ರ ಮಾದರಿಯಾಗಿ ನಿರ್ಮಾಣಗೊಂಡಿದೆ. ಸಾಮಾನ್ಯ ಸಿರಿವಂತರಿರುವ ಇಲ್ಲಿ ಪೋಷಕರೇ ಕಟ್ಟಡ ನಿರ್ಮಿಸುವಾಗ ಮಣ್ಣು ಹೊತ್ತು ಕಟ್ಟಡ ನಿರ್ಮಿಸಲೂ ನೆರವಾಗಿದ್ದಾರೆ. ಈಗಲೂ ಶಾಲೆಗೆ ಬಂದಲ್ಲಿ ಸ್ವ-ಇಚ್ಛೆಯಿಂದ ಪಾತ್ರೆ ಹಾಗೂ ಇತರ ಸ್ವತ್ಛತೆಗೆ ಮುಂದಾಗುತ್ತಾರೆ. ಇದರ ಜತೆಗೆ ಆಧುನಿಕ ವ್ಯವಸ್ಥೆ ಟ್ಯಾಬ್‌ ಮೂಲಕ ಚಿಣ್ಣರಿಗೆ ಶಿಕ್ಷಣ ನೀಡುವ ಈ ಕೇಂದ್ರ ರಾಷ್ಟ್ರವ್ಯಾಪಿ ಖ್ಯಾತಿಗೂ ಕಾರಣವಾಗುತ್ತಿದೆ.

Advertisement

ಭವಿಷ್ಯ ಬೆಳಗಿಸುತ್ತಿದೆ
ಶಿಕ್ಷಕಿಯಾಗಿ ಬಂದಾಗಿಂದ ಏನಾದರೂ ಹೊಸತನ ತರಬೇಕು ಎಂಬ ಯೋಚನೆಯಿತ್ತು. ಪರಿಸರದ ಮಕ್ಕಳ ಪೋಷಕರನ್ನು ಸವಲತ್ತಿಗಾಗಿ ಕೇಳಿಕೊಂಡೆ. ಕೇಳಿದ ತತ್‌ಕ್ಷಣ ಯಾರೊಬ್ಬರೂ ಹಿಂಜರಿಯದೆ ಸ್ಪಂದಿಸಿ ಶಾಲೆಗೆ ಬೇಕಾದ ಎಲ್ಲ  ಸವಲತ್ತು ಒದಗಿಸಿದರು. ನಿರೀಕ್ಷೆ ಮೀರಿದ ಸೊತ್ತುಗಳು ಒದಗಿ ಅಚ್ಚರಿ ಮೂಡಿತು. ಕೇಳುವ ಮನಸ್ಸಿದ್ದರೆ ಕೊಡುವ ಕೈಗಳಿರುತ್ತವೆ. ಬಾಲವಿಕಾಸ ಸಮಿತಿ, ಕಟ್ಟಡ ಸಮಿತಿ, ಪೋಷಕರು, ಸಂಘ-ಸಂಸ್ಥೆಗಳ ನೆರವು ಇಲ್ಲಿ ಮಕ್ಕಳ ಭವಿಷ್ಯ ಬೆಳಗಿಸುತ್ತಿದೆ.
-ಲತಾ ಅಂಬೆಕಲ್ಲು ,  ರಾಜ್ಯ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪುರಸ್ಕೃತೆ, ಬಳ್ಳಕ

ಆಧುನಿಕ ಶೈಲಿಯ ಶಿಕ್ಷಣ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಇಲ್ಲಿ ಪ್ರೋತ್ಸಾಹ ಸಿಗುತ್ತಿದೆ. ನಗರ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಆಧುನಿಕ ಶೈಲಿಯಲ್ಲಿ ಶಿಕ್ಷಣ ದೊರಕುತ್ತಿದೆ. ಇದು ನಮಗೆ ಹೆಮ್ಮೆ ತಂದಿದೆ. 
– ಮಿತ್ರಕುಮಾರಿ ಚಿಕ್ಕುಳಿ,  ಬಾಲವಿಕಾಸ ಸಮಿತಿ ಅಧ್ಯಕ್ಷೆ

 ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next