Advertisement

ಶಿಕ್ಷಣ ವಂಚಿತ ಮಕ್ಕಳು: ಸರಕಾರ ಗಂಭೀರವಾಗಿ ಪರಿಗಣಿಸಲಿ

12:22 AM Jul 08, 2022 | Team Udayavani |

ರಾಜ್ಯದಲ್ಲಿ ಹದಿನಾಲ್ಕು ವರ್ಷದೊಳಗಿನ 10 ಲಕ್ಷ ಮಕ್ಕಳು ಶಾಲೆ ಹಾಗೂ ಅಂಗನವಾಡಿಗಳಿಂದ ಹೊರಗುಳಿದಿರುವ ಸಮೀಕ್ಷಾ ವರದಿ ನಿಜಕ್ಕೂ ಆಘಾತಕಾರಿ. ಕೊರೊನಾ ಹಾಗೂ ವಲಸೆ ಹಿನ್ನೆಲೆಯಲ್ಲಿ ಮಕ್ಕಳು ಶಾಲೆ ಹಾಗೂ ಅಂಗನವಾಡಿಗಳಿಂದ ಹೊರಗೆ ಉಳಿದಿದ್ದಾರೆ ಎಂದರೆ ಅಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾದಂತೆ ಎಂಬ ಅಂಶ ಗಮನಿಸಬೇಕಾದ ಸಂಗತಿ. ರಾಜ್ಯ ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಇಷ್ಟೂ ಲಕ್ಷ ಮಕ್ಕಳು ಬಡ ಹಾಗೂ ಮಧ್ಯಮವರ್ಗದವರೇ ಆಗಿರುತ್ತಾರೆ. ಕಾರ್ಮಿಕರು ಹಾಗೂ ಕೃಷಿ ಕುಟುಂಬಗಳ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಇರಬಹುದು.

Advertisement

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣದಿಂದ ಪ್ರಾರಂಭಿಕ ಹಂತದಲ್ಲೇ ಮಕ್ಕಳು ಹೊರಗೆ ಉಳಿದರೆ ಅನಂತರ ಅವರನ್ನು ಮತ್ತೆ ಶಾಲೆಗಳತ್ತ ಕರೆತರುವುದು ಅಸಾಧ್ಯವೇ ಸರಿ. ಒಂದೊಮ್ಮೆ ಮಕ್ಕಳು ಶಾಲೆಯಿಂದ ಹೊರಗುಳಿದರೆ ಬಾಲ ಕಾರ್ಮಿಕರಾಗುವ ಮತ್ತೂಂದು ಅಪಾಯವೂ ಇಲ್ಲದಿಲ್ಲ. ನಗರಾಭಿವೃದ್ಧಿ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಸಮೀಕ್ಷೆ ಪ್ರಕಾರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಕ್ಕಳು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಂದ ಹೊರಗುಳಿಯಲು ಪ್ರಮುಖ ವಾಗಿ ವಲಸೆ ಜತೆಗೆ ಕೋವಿಡ್‌ ಸಹ ಕಾರಣವಾಗಿದೆ. ಇದರ ಬಗ್ಗೆ ಸರಕಾರ ಗಮನಹರಿಸಿ ಆ ಮಕ್ಕಳನ್ನು ಮರಳಿ ಶಾಲೆ ಹಾಗೂ ಅಂಗನ ವಾಡಿಗಳತ್ತ ತರುವ ಕೆಲಸ ಮಾಡಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಆವರು ಶಿಕ್ಷಣದಿಂದಲೇ ವಂಚಿತರಾಗುವ ಸಾಧ್ಯತೆಯೂ ಇರುತ್ತದೆ.

ಒಮ್ಮೆ ಮಕ್ಕಳು ಶಿಕ್ಷಣ ಬಿಟ್ಟು ದುಡಿಯಲು ಹೋದರೆ ಬಡ ಕುಟುಂಬಗಳ ಪೋಷಕರು ಆರ್ಥಿಕ ಸಂಕಷ್ಟದಿಂದ ಮತ್ತೆ ಮಕ್ಕಳನ್ನು ಶಿಕ್ಷಣದತ್ತ ಕಳುಹಿಸುವುದು ಕಡಿಮೆಯಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಪ್ರತೀ ಗ್ರಾಮ ಹಾಗೂ ನಗರ ಪ್ರದೇಶದ ಮನೆ ಮನೆ ಸಮೀಕ್ಷೆ ನಡೆಸಿ ಶಾಲೆ ಬಿಟ್ಟ ಅಥವಾ ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕ ಳನ್ನು ಪತ್ತೆ ಹಚ್ಚಿ ಶಾಲೆಗೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಮಾಡ ಬೇಕು. ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳುಗಳು ಕಳೆದಿದ್ದರೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಯದೆ ತತ್‌ಕ್ಷಣವೇ ಮಕ್ಕಳನ್ನು ಶಾಲೆ ಅಥವಾ ಅಂಗನವಾಡಿಗೆ ಕರೆತರಬೇಕಿದೆ.

ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಭಾಗದಲ್ಲಿ ಒಟ್ಟಾರೆ 6 ರಿಂದ 14 ವರ್ಷದ  15,338 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.  ಇದೇ ವಯೋಮಾನದ 10 ಸಾವಿರ ಮಕ್ಕಳು ಶಾಲೆಗಳಲ್ಲಿ ಪ್ರವೇಶವನ್ನೇ ಪಡೆದಿಲ್ಲ.  3 ವರ್ಷದೊಳಗಿನ 4.54 ಲಕ್ಷ ಮಕ್ಕಳು ಹಾಗೂ 4ರಿಂದ 6 ವರ್ಷದ 5.33 ಲಕ್ಷ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿಲ್ಲ. ರಾಜ್ಯದಲ್ಲಿ ಒಟ್ಟಾರೆ 10.12 ಲಕ್ಷ ಮಕ್ಕಳು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಂದ ಹೊರಗುಳಿದಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.  ಇದು ಕಳವಳಕಾರಿ ವಿಷಯವೂ ಹೌದು. ಸರಕಾರ  ಈ ಅಂಶವನ್ನು ಗಂಭೀರವಾಗಿ ಪರಿಗಣಿಸಲೇಬೇಕು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ವಿಚಾರವಾಗಿ  ಹೈಕೋರ್ಟ್‌  ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದು ಸ್ವಾಗತಾರ್ಹ. ಏಕೆಂದರೆ ನ್ಯಾಯಾಲಯ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಆರ್ಜಿ ವಿಚಾರಣೆ ನಡೆಸದಿದ್ದರೆ ಈ ಮಾಹಿತಿಯೂ ಹೊರಗೆ ಬರುತ್ತಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next