Advertisement

1-3 ತರಗತಿ ಮಕ್ಕಳ ಕಲಿಕಾ ಕೌಶಲಕ್ಕೆ “ನಿಪುಣ ಕರ್ನಾಟಕ’!

11:49 PM Apr 21, 2022 | Team Udayavani |

ಮಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ ಎನ್‌ಇಪಿ ಜಾರಿ ಹಿನ್ನೆಲೆಯಲ್ಲಿ ಮುಂಬರುವ 1ರಿಂದ 3ನೇ ತರಗತಿ ಮಕ್ಕಳು ಓದಲು, ಬರೆಯಲು ಮತ್ತು ಸಂಖ್ಯಾಜ್ಞಾನ ಪಡೆಯುವಂತೆ ಮಹಾ ಅಭಿಯಾನವೊಂದು ಕೇಂದ್ರ ಸರಕಾರದಿಂದ ರೂಪುಗೊಂಡಿದೆ.

Advertisement

2022-23ನೇ ಶೈಕ್ಷಣಿಕ ಸಾಲಿನ 1ನೇ ತರಗತಿಯಿಂದಲೇ ವಿಶೇಷ ಪಾಠದ ಮೂಲಕ ಪುಟಾಣಿಗಳಲ್ಲಿ ಅಕ್ಷರಜ್ಞಾನ ಉದ್ದೀಪಿಸುವ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 2026-27ರ ವೇಳೆಗೆ ಪ್ರತೀ ಮಗು 3ನೇ ತರಗತಿಯ ಅಂತ್ಯದೊಳಗೆ ಬುನಾದಿ ಅಕ್ಷರ ಮತ್ತು ಸಂಖ್ಯಾಜ್ಞಾನ ಕೌಶಲ ಪಡೆಯಲಿದೆ. ಈ ಮೂಲಕ ಪುಟಾಣಿಗಳಿಗೆ ಅಕ್ಷರ ಜ್ಞಾನದ ತಳಪಾಯ ಹಾಕುವ ವಿಭಿನ್ನ ಪ್ರಯತ್ನ ಎಲ್ಲ ಶಾಲೆಗಳಲ್ಲಿ ಆರಂಭವಾಗಲಿದೆ.

ಪ್ರಸ್ತುತ ಪ್ರಾಥಮಿಕ ಶಾಲಾ ಹಂತದಲ್ಲಿರುವ ಹೆಚ್ಚಿನ ಮಕ್ಕಳು ಬುನಾದಿ ಅಕ್ಷರ ಮತ್ತು ಸಂಖ್ಯಾ ಕೌಶಲಗಳನ್ನು ಹೊಂದಿಲ್ಲ. ಈ ಪುಟಾಣಿಗಳಿಗೆ ಪ್ರಾರಂಭಿಕ ಶಿಕ್ಷಣವನ್ನು ಒದಗಿಸುವ ನೆಲೆಯಲ್ಲಿ ಶಾಲೆಗಳಲ್ಲಿ ಮೂಲ ಕಲಿಕೆಯನ್ನು ಸಾಧಿಸಲು ಮತ್ತು ಎಲ್ಲ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಹೊಂದಲು ಸಾಧ್ಯವಾಗುವಂತೆ (Foundation Literacy and Numeracy)ಎಂಬ ವಿಶೇಷ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.

ಭವಿಷ್ಯದ ಕಲಿಕೆಯಲ್ಲಿ ಬುನಾದಿ ಕೌಶಲಗಳ ನಿರ್ಣಾಯಕ ಪಾತ್ರವನ್ನು ಗುರುತಿಸುತ್ತ, 2026-27ರ ವೇಳೆಗೆ ಪ್ರತೀ ಮಗು 3ನೇ ತರಗತಿಯ ಅಂತ್ಯದೊಳಗೆ ಬುನಾದಿ ಅಕ್ಷರ ಮತ್ತು ಸಂಖ್ಯಾಜ್ಞಾನ ಕೌಶಲ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಈ ಉದ್ದೇಶಕ್ಕಾಗಿ, ಸಂಪದ್ಭರಿತ ಪಠ್ಯಕ್ರಮದ ಚೌಕಟ್ಟು, ವ್ಯಾಖ್ಯಾನಿಸಲಾದ ಮತ್ತು ಮಾಪನ ಮಾಡಬಹುದಾದ ಕಲಿಕಾ ಫಲಗಳು, ಕಲಿಕಾ ಸಾಮಗ್ರಿಗಳು, ಶಿಕ್ಷಕರ ಸಾಮರ್ಥ್ಯವರ್ಧನೆ, ಮೌಲ್ಯಮಾಪನ ತಂತ್ರಗಳು ಇತ್ಯಾದಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸಲು ಅಭಿವೃದ್ಧಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಶೈಕ್ಷಣಿಕ ಹಂತದಿಂದ ವಿಶೇಷ ಕಾರ್ಯಕ್ರಮಗಳು ರೂಪುಗೊಳ್ಳಲಿವೆ ಎನ್ನುತ್ತಾರೆ ದ.ಕ. ಡಯಟ್‌ನ ಉಪನಿರ್ದೇಶಕಿ (ಅಭಿವೃದ್ಧಿ) ರಾಜಲಕ್ಷ್ಮೀ.

ಶಿಕ್ಷಕರ ಸಾಮರ್ಥ್ಯ ವರ್ಧನೆಗೆ ಮಾರ್ಗದರ್ಶನ :

Advertisement

ಪ್ರಾರಂಭಿಕ ಹಂತವಾಗಿ 1ರಿಂದ 3ನೇ ತರಗತಿ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತದೆ. ಅದರಂತೆ ಕೇಂದ್ರ ಸರಕಾರ “ನಿಪುಣ ಭಾರತ’ ಮಿಶನ್‌ ಆರಂಭಿಸಿದೆ. ಅದರಡಿಯಲ್ಲಿ  FLN ಯೋಜನೆ ಜಾರಿಗೆ

ಬಂದಿದೆ. “ನಿಪುಣ ಕರ್ನಾಟಕ’ ಆರಂಭಿಸ ಲಾಗಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಇದರ ಮೊದಲ ಸಭೆ ಆರಂಭವಾಗಿದೆ. ಶಿಕ್ಷಕರ ಸಾಮರ್ಥ್ಯ ವರ್ಧನೆಗೆ ಡಯಟ್‌ ವ್ಯಾಪ್ತಿಯಲ್ಲಿ ತರಬೇತಿ, ಪ್ರತೀ 20 ಶಿಕ್ಷಕರಿಗೆ ಮಾರ್ಗದರ್ಶಕರ ನೇಮಕ, ಶಿಶು ಸಾಹಿತ್ಯ ಸಂಗ್ರಹ ಕೋಶ, ಗಣಿತ ಕಿಟ್‌ ಬಳಕೆ ಸಹಿತ ವಿವಿಧ ಆಯಾಮಗಳನ್ನು ಬಳಸಲು ನಿರ್ಧರಿಸಲಾಗಿದೆ.

“ನಿಪುಣ ಕರ್ನಾಟಕ’ ಯೋಜನೆ ಜಾರಿಗೊಳಿಸಲಾಗಿದೆ. ಪುಟಾಣಿಗಳಲ್ಲಿ ಬುನಾದಿ ಅಕ್ಷರ ಮತ್ತು ಸಂಖ್ಯಾಜ್ಞಾನ ಬೆಳೆಸುವುದು ಯೋಜನೆಯ ಉದ್ದೇಶ. ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಂಚಲನ ಸಮಿತಿ ರಚಿಸಲಾಗಿದೆ. ಅದರ ಮೂಲಕ ಶಾಲೆಗಳಲ್ಲಿ ಅಕ್ಷರ ಪ್ರೀತಿಯ ವಿನೂತನ ಪರಿಕಲ್ಪನೆ ಪುಟಾಣಿ ಮಟ್ಟದಲ್ಲಿ ಅನುಷ್ಠಾನಕ್ಕೆ ಬರಲಿದೆ. -ಸುಧಾಕರ್‌, ಉಪನಿರ್ದೇಶಕರು ಸಾರ್ವಜನಿಕರ ಶಿಕ್ಷಣ ಇಲಾಖೆ-ದ.ಕ

 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next