Advertisement

ಶಿಕ್ಷಣದಿಂದ ಆತ್ಮನಿರ್ಭರಗೊಳ್ಳುವ ಸದಾಶಯ

11:20 PM Aug 16, 2021 | Team Udayavani |

ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಪರಿಣಾಮಕಾರಿ ಅನುಷ್ಠಾನದ ಮೂಲಕ  ಮುಂದಿನ 25 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆಯಾಗಲಿದೆ. ಆಮೂಲಾಗ್ರ ಬದಲಾವಣೆಗಳೊಂದಿಗೆ ಈ ಹಿಂದಿನ ತಪ್ಪು ಗಳು ಮರುಕಳಿಸದಂತೆ ಜಾಗರೂಕತೆ ವಹಿಸಲು ಅಗತ್ಯಕ್ರಮಗಳನ್ನು ಶಿಕ್ಷಣ ನೀತಿ ಹಾಗೂ ವ್ಯವಸ್ಥೆ ಯಲ್ಲಿ ಅಳವಡಿಸಲಾಗುತ್ತದೆ. ಎಲ್ಲವೂ ವಿದ್ಯಾರ್ಥಿ ಕೇಂದ್ರಿತ, ವಿದ್ಯಾರ್ಥಿ ಸ್ನೇಹಿಯಾಗಿ ಜೀವನದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ತಯಾರು ಮಾಡಲು ಸಾಧ್ಯವಾಗಲಿದೆ.

Advertisement

ಮೂಲ ಸೌಕರ್ಯಗಳು, ಸರಕಾರೇತರ ಉತ್ತೇಜನ, ಶಿಕ್ಷಕರ ಹೆಚ್ಚಿನ ಹೊಣೆ ಹಾಗೂ ನೈತಿಕ ಹೊಣೆಗಾರಿಕೆ, ಸಾಮರ್ಥ್ಯ ವೃದ್ಧಿ, ದೃಢ ಸಂಕಲ್ಪದೊಂದಿಗೆ ಇಚ್ಛಾಶಕ್ತಿಯ ಕೊರತೆಯನ್ನು ನೀಗಿಸಲಿದೆ. ಮೃದು ಹಾಗೂ ಜೀವನ ಕೌಶಲಗಳಿಗೆ ಹೆಚ್ಚಿನ ಪ್ರಾಮುಖ್ಯ. ಬಹುಶಿಸ್ತೀಯ ಶಿಕ್ಷಣ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೈಗೆಟಕುವ ಖರ್ಚಿನಲ್ಲಿ, ಅವಕಾಶ ವಂಚಿತರಾಗದೆ ದೊರೆಯುವ ಆಹಾರ, ಆರೋಗ್ಯ ಮತ್ತು ವಿದ್ಯೆ; ರಾಷ್ಟ್ರಪ್ರೇಮ ಹಾಗೂ ಚಾರಿತ್ರ್ಯ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಪ್ರಾಮಾ ಣಿಕತೆ ಹಾಗೂ ಬದ್ಧತೆಯಿಂದ ತೊಡಗಿಸಿಕೊಳ್ಳಲು ಪೂರಕವಾದ ಭೌತಿಕ, ಸಾಮಾಜಿಕ, ಮಾನಸಿಕ ವಾತಾವರಣದ ಸೃಷ್ಟಿ ಸಾಧ್ಯವಾಗಲಿದೆ.

ಕಲಿಕೆ-ಜೀವನಪರ್ಯಂತ ನಡೆಯುವ ನಿರಂ ತರ ಪ್ರಕ್ರಿಯೆ. ಅಂಕಗಳಷ್ಟೇ ಮಾನದಂಡಗಳಲ್ಲ, ಪದವಿಗಾಗಿ ಪದವಿ ಪಡೆಯುವ ಮನಸ್ಥಿತಿ ಬದಲಾಗಿ ಹೊಸ ಚಿಂತನೆಗಳೊಂದಿಗೆ ವಿದ್ಯಾ ರ್ಥಿಯ ಸರ್ವಾಂಗೀಣ  ಪ್ರಗತಿಗೆ ಪ್ರಾಮುಖ್ಯತೆ ಸಿಗಲಿದೆ. ವಿದ್ಯಾರ್ಥಿಯಲ್ಲಿ ಅವಿತ ಪ್ರತಿಭೆಯನ್ನು ಹೊರತರಲು ಬೇಕಾದ ಚಟುವಟಿಕೆಗಳ ಮೂಲಕ ಕಲಿಕೆ, ಪಠ್ಯಕ್ರಮಗಳ ಹೊರತಾದ ಕಲಿಕೆ, ತರಗತಿ ಕೊಠಡಿಯ ಹೊರಗಿನ ಕಲಿಕೆ, ಸೃಜನ ಶೀಲತೆ ಹಾಗೂ ಸ್ವಂತಿಕೆಗೆ ಆದ್ಯತೆ ನೀಡುವ ಸಮ ರ್ಪಕ ತಂತ್ರಜ್ಞಾನದ ಸದ್ಭಳಕೆಗೆ ಪ್ರಾಶಸ್ತ್ಯ ಸಿಗಲಿದೆ.

ಜ್ಞಾನಾರ್ಜನೆಯಲ್ಲಿ ಮಡಿವಂತಿಕೆಯನ್ನು ಬದಿಗಿರಿಸಿ ದೂರಶಿಕ್ಷಣ, ಅನೌಪಚಾರಿಕ ಶಿಕ್ಷಣ, ಮುಕ್ತ ಕಲಿಕೆ, ಮನೆಯಲ್ಲಿಯೇ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣವನ್ನು ಸಮಗ್ರವಾಗಿ ಬಳಸಿ ವಿದ್ಯಾಭ್ಯಾಸ, ಪ್ರಶ್ನೆಗಳಿಗೆ ಉತ್ತರಿಸುವ ಬದಲು ಉತ್ತರಗಳನ್ನೇ ಪ್ರಶ್ನಿಸುವ ಪರಿಕಲ್ಪನೆ ಮೂಡಲಿದೆ. ಅನುಭವದ ಮೂಲಕ ಕಲಿಕೆ, ನಿರಂತರತೆಯೊಂದಿಗೆ ಬದಲಾವಣೆಗಳನ್ನು ಅಳವಡಿಸಿಕೊಂಡು ಹೋಗುವ ಮನಸ್ಥಿತಿ ಹಾಗೂ ಸ್ವಭಾವ, ಅನಿಶ್ಚಿತತೆಯೊಂದಿಗೆ ನಿಶ್ಚಿತತೆ ಯನ್ನು ಕಂಡುಕೊಳ್ಳುವ ಚಾಕಚಕ್ಯತೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ.

ಬದಲಾಗುತ್ತಿರುವ ಸಮಯ- ಸಂದರ್ಭ-ಸನ್ನಿ ವೇಶಗಳಿಗೆ ಅನುಗುಣವಾಗಿ ಪಠ್ಯಕ್ರಮ ಪರಿಷ್ಕರಣೆ, ಹೊಸ ಶೈಕ್ಷಣಿಕ ಕಾರ್ಯಕ್ರಮಗಳು, ಬೋಧನ ಪದ್ಧತಿ ಹಾಗೂ ಶೈಲಿಯಲ್ಲಿ ಸೂಕ್ತ ಬದಲಾವಣೆ, ಆನ್‌ಲೈನ್‌ ಕಲಿಕೆ-ಬೋಧನೆ-ಪರೀಕ್ಷಾ ಕಾರ್ಯ, ಅಕಾಡೆಮಿಕ್‌ ಬ್ಯಾಂಕ್‌ ಆಫ್‌ ಕ್ರೆಡಿಟ್‌ನ ಪರಿಕಲ್ಪನೆ, ತಮಗೆ ಬೇಕಾದ ಕಲಿಕಾ ವಿಷಯ ಹಾಗೂ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರÂ-ಇತ್ಯಾದಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಲಿದೆ.

Advertisement

ಬಾಯಿ ಪಾಠ ಮಾಡಿ ಮೂರು ಗಂಟೆಗಳ ಪರೀಕ್ಷೆ ಬರೆದು ಅಂಕಗಳಿಗೆ ಪರದಾಡುವುದರಿಂದ ಹೊರಗೆ ಬಂದು, ಉದ್ಯೋಗಾರ್ಹತೆ ಹೆಚ್ಚಿಸುವ, ಕೌಶಲಾಧಾರಿತ, ನೈತಿಕ ಮೌಲ್ಯಗಳ ಕಲಿಕೆಗೆ ಒತ್ತು ನೀಡಲಾಗುತ್ತದೆ. ಅಂಕ ಗಳ ಬದಲು ಕಾಲೇಜಿನಿಂದ ಕಾಲೇಜಿಗೆ, ವಿ ವಿಗಳಿಂದ ಇನ್ನೊಂದು ವಿ ವಿ ಗೆ, ದೇಶ ವಿದೇಶಗಳಿಗೆ ವರ್ಗಾವಣೆಗೆ ಹಾಗೂ ಸ್ವೀಕೃತಿಗೆ ಪೂರಕವಾದ ಕ್ರೆಡಿಟ್‌ಗಳ ವ್ಯವಸ್ಥೆ ಬರಲಿದೆ.

ಕ್ರಮಬದ್ಧ ಅನುಷ್ಠಾನ ಅಗತ್ಯ :

1968 ಮತ್ತು 1986ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊ ಳಿಸುವಲ್ಲಿನ ವೈಫ‌ಲ್ಯದ ಪಾಠ ಕಲಿತು ಆ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಹೊಣೆ. ಎಲ್ಲರೂ ಸ್ವತ್ಛ ಹಾಗೂ ಸ್ವಸ್ಥ ಮನಸ್ಸು, ರಾಷ್ಟ್ರಪ್ರೇಮ ಕೇಂದ್ರಿತ ದೃಢ ಸಂಕಲ್ಪ, ಸಕಾರಾತ್ಮಕ ಹಾಗೂ ಧನಾತ್ಮಕ ಚಿಂತನೆಗಳೊಂದಿಗೆ ತಂಡೋಪತಂಡವಾಗಿ ಕಾರ್ಯಪ್ರವೃತ್ತರಾದಲ್ಲಿ ಮಾತ್ರ ಇದರ ಲಾಭ ಮುಂದಿನ 25 ವರ್ಷಗಳಲ್ಲಿ ಪಡೆಯಲು ಸಾಧ್ಯ.  ಅರ್ಧಂಬರ್ಧ ಅನುಷ್ಠಾನ ಅಥವಾ ಅನುಷ್ಠಾನದಲ್ಲಿನ ವಿಳಂಬ ಸೇರಿದಂತೆ ಕೆಲವು ನಕಾರಾತ್ಮಕ ಸಂಗತಿ ಎದುರಾದರೆ ಸರ್ವರ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತಾಗಬಹುದು. ಒಂದೇ ಬೀಗದ ಕೈಯಿಂದ ಬೀಗ ತೆಗೆಯಲೂ ಬಹುದು;  ತೆರೆದಿರುವ ಬೀಗವನ್ನು ಹಾಕಲೂಬಹುದು; ಆತ್ಮನಿರ್ಭರ, ಸ್ವಾಭಿಮಾನಿ, ಸ್ವಾವಲಂಬಿ, ಸಮೃದ್ಧ ಹಾಗೂ ಸಮರ್ಥ ರಾಷ್ಟ್ರ ನಿರ್ಮಾಣದ ಕನಸು ಶಿಕ್ಷಣ ಕ್ಷೇತ್ರದಲ್ಲಿ ಮುಂದಿನ 25 ವರ್ಷಗಳಲ್ಲಿ ಕಾಣಲಿರುವ ಪರಿವರ್ತನೆಯ ಮೂಲಕ ನನಸಾಗಲಿದೆ.

ಪ್ರೊ| ಪಿ.ಎಸ್‌. ಯಡಪಡಿತ್ತಾಯ

ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next