ಹುಣಸೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಜವಾಬ್ದಾರಿಯನ್ನು ಶಿಕ್ಷಕರು ಹೊರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ತಿಳಿಸಿದರು.
ನಗರದ ಶಿಕ್ಷಕರ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಅಥವಾ ದೀರ್ಘಕಾಲ ಗೈರಾದ 6ರಿಂದ 14 ವಯೋಮಾನದ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲು ದಾಖಲಾತಿ ಆಂದೋಲನದ ರೂಪಿಸಲಾಗಿದೆ.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಶಿಕ್ಷಣ ಎಲ್ಲರ ಮೂಲಭೂತ ಹಕ್ಕಾಗಿದ್ದರೆ, ಅದೇ ರೀತಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದು ಶಿಕ್ಷಕನ ಆದ್ಯಕರ್ತವ್ಯವಾಗಿದೆ. ಯಾವುದೇ ತಾರತಮ್ಯವಿಲ್ಲದೇ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಶ್ರಮಿಸುವಂತೆ ಮನವಿ ಮಾಡಿದರು.
ಗಿರಿಜನ ಮಕ್ಕಳಿಗೆ ಶಿಕ್ಷಣ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ದಾಖಲಾತಿ ಆಂದೋಲನಕ್ಕೆ ಪೋಷಕರು, ಸಾರ್ವಜನಿಕರು ಎಲ್ಲರೂ ಕೈಜೋಡಿಸಬೇಕು ಎಂದರು.
ಜಾಥಾ: ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಡೆಸಿದ ಜಾಥಾಕ್ಕೆ ಬಿಇಒ ರೇವಣ್ಣ ಚಾಲನೆ ನೀಡಿದರು. ಘೋಷಣೆಗಳುಳ್ಳ ಭಿತ್ತಿಪತ್ರ ಹಿಡಿದಿದ್ದ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ದಾಖಲಾತಿ ಆಂದೋಲನದ ಮಹತ್ವ ಸಾರಿದರು. ಬಿಆರ್‌ಸಿ ಮೊಗಣ್ಣ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ನಾಗಸುಂದರ್, ಬಿಆರ್‌ಪಿಗಳು, ಸಿಆರ್‌ಪಿಗಳು, ನಗರದ ವ್ಯಾಪ್ತಿಯ ಸರಕಾರಿ ಶಾಲೆಯ ಮುಖ್ಯಶಿಕ್ಷಕರು ಭಾಗವಹಿಸಿದ್ದರು.