ದಾವಣಗೆರೆ: ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸಬಾರದು ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ| ಎಂ.ಎ. ಸಲೀಂ ತಿಳಿಸಿದ್ದಾರೆ. ಎಸ್‌ಪಿಎಸ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲಾವರಣದಲ್ಲಿ ಗುರುವಾರ ಡಾನ್ ಬಾಸ್ಕೋ, ಕೀಂ ಯೋಜನೆ, ಬಿಆರ್‌ಇಎಡಿಎಸ್ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಇತರೆ ಸಂಘ, ಸಂಸ್ಥೆಗಳಿಂದ ಹಮ್ಮಿಕೊಂಡ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.
ಪೋಷಕರು ತಮ್ಮ ಮನೆಯಲ್ಲಿ ಎಷ್ಟೇ ಕಷ್ಟ, ಸಮಸ್ಯೆ ಬಂದರೂ ಮಕ್ಕಳ ವಿದ್ಯಾಭ್ಯಾಸ ಮೊಟಕು ಮಾಡದಂತೆ ನೋಡಿಕೊಳ್ಳಬೇಕು ಎಂದರು ಬಡ ಕುಟುಂಬಗಳಲ್ಲಿನ ಮಕ್ಕಳು ಇಂದು ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಅನೇಕ ಸಾಮಾಜಿಕ ಅನಿಷ್ಟ ಪದ್ಧತಿಗೆ ಬಲಿಯಾಗುತ್ತಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಡೀ ಸಮಾಜ ಶ್ರಮಿಸಬೇಕಿದೆ ಎಂದರು.
ಇಂದಿನ ತಾಂತ್ರಿಕ ಯುಗದಲ್ಲಿ ನಾವು ಸಾಕಷ್ಟು ಸವಲತ್ತು ಪಡೆಯುತ್ತಿದ್ದೇವೆ. ಉತ್ತಮ ಸಮಾಜ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸವಲತ್ತು ನಮಗಿವೆ. ಇವೆಲ್ಲಾ ನಮ್ಮ ಪೂರ್ವಜರ ಕೊಡುಗೆ. ಇವನ್ನು ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಮಕ್ಕಳು ದೊಡ್ಡ ದೊಡ್ಡ ಕನಸು ಕಟ್ಟಿಕೊಂಡು, ಅವುಗಳ ಸಾಕಾರಕ್ಕೆ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳ ರಕ್ಷಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ್, ಪ್ರತಿ ವರ್ಷ ಜಗತ್ತಿನ 150 ಕೋಟಿ ಜನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಂಘರ್ಷಗಳಿಂದ ಸಮಸ್ಯೆಗೆ ಗುರಿಯಾಗುತ್ತಿದ್ದರೆ, ಇನ್ನೂ 20 ಕೋಟಿ ಜನ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ದಿವಾಳಿಯಾಗುತ್ತಿದ್ದಾರೆ.
ಈ ಅಂಕಿ ಅಂಶದ ಮೂರನೇ ಒಂದು ಭಾಗದ ಮಕ್ಕಳು, ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇದು ಆಘಾತಕಾರಿ ಎಂದರು. ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ಹೋದರೆ, ಅವರ ಶಿಕ್ಷಣ ಹಾಳಾಗಲಿದೆ. ಮಕ್ಕಳನ್ನು ದುಡಿಮೆಗೆ ಕಳುಹಿಸುವ ಸಲುವಾಗಿ ಮಕ್ಕಳ ಅಪಹರಿಸಿ, ಅಂಗಹೀನರನ್ನಾಗಿ ಮಾಡಿ ಬಲವಂತವಾಗಿ ಅತ್ಯಂತ ಹೀನ ದುಡಿಮೆಗೆ ಹಚ್ಚುವ ಜಾಲವೂ ಇದೆ. ಇಂತಹ ಜಾಲಗಳ ವಿರುದ್ಧ ಇಡೀ ಸಮಾಜ ಕಣ್ಣಿಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಅಧ್ಯಕ್ಷತೆ ವಹಿಸಿದ್ದರು. ರೈಲ್ವೆ ರಕ್ಷಣಾ ದಳ ನಿರೀಕ್ಷಕ ಶಾಜಿ ಮ್ಯಾಥು, ಬಿಇಒ ಬಿ.ಆರ್. ಬಸವರಾಜಪ್ಪ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ, ಮುಖ್ಯೋಪಾಧ್ಯಾಯ ಡಿ.ಆರ್. ನಾಗೇಂದ್ರಪ್ಪ, ಡಾನ್ ಬೋಸ್ಕೋ ಸಂಸ್ಥೆ ನಿರ್ದೇಶಕ ಸಿರಿಲ್ ಸಗಾಯರಾಜ್, ಎಸ್.ಡಿ. ಶಿವಾನಂದ, ಪಾಸ್ಟರ್ ಜೋಷ್ ವೇದಿಕೆಯಲ್ಲಿದ್ದರು.