ಬೆಂಗಳೂರು: ಭ್ರಷ್ಟಾಚಾರದ ಕುರಿತು ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ದೂರು ನೀಡಿ, ಅದನ್ನು ಬಿಟ್ಟು ಖಾಲಿ ಡಂಗುರ ಬಾರಿಸುವುದು ನಿಮ್ಮ ಹುದ್ದೆಗೆ ಶೋಭೆ ತರುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿರುಗೇಟು ನೀಡಿದ್ದಾರೆ.
ತಮ್ಮ ಇಲಾಖೆ ವಿರುದ್ಧ ಸಿದ್ದರಾಮಯ್ಯ ಮಾಡುತ್ತಿದ್ದ ಆರೋಪಗಳಿಗೆ ಇದೇ ಮೊದಲ ಬಾರಿಗೆ ಸರಣಿ ಟ್ವೀಟ್ ಮೂಲಕ ಉತ್ತರಿಸಿರುವ ನಾಗೇಶ್, ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ನೀವು, ಆರೋಪಗಳ ಬಗ್ಗೆ ಪುರಾವೆ ಸಮೇತ ದೂರು ನೀಡಿ ಸಾಬೀತುಪಡಿಸಿ. ಬರೀ ಗಾಳಿಯಲ್ಲಿ ಗುಂಡು ಹಾರಿಸುವುದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಸಂಸ್ಥೆಯ ಅಧಿಕಾರ ಕಸಿದು ಎಸಿಬಿ ರಚಿಸಿದ್ದು ದುರುದ್ದೇಶದಿಂದ ಅಲ್ಲವೇ? ಹಿಂದೂಗಳ ವಿಭಜನೆಗೆ ಯತ್ನ, ಹಗರಣಗಳು, ಭ್ರಷ್ಟಾಚಾರ, ಅಧಿಕಾರಿಗಳ ಸಾವುಗಳು, ಶಾಲಾ ಮಕ್ಕಳಲ್ಲಿ ತಾರತಮ್ಯ, ಸಮಾಜವಾದದ ಹೆಸರಿನಲ್ಲಿ ಹೂಬ್ಲೋಟ್ ವಾಚ್ ಧರಿಸಿ ಮಜಾವಾದ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕೊನೆಯೇ ಇಲ್ಲ. ತುಷ್ಟೀಕರಣ, ಜಾತಿವಾದ, ಹಿಂದೂಗಳ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳ ಅವಹೇಳನ, ಅವಮಾನ ಮಾಡಿಕೊಂಡು ಓಡಾಡುವ ನಿಮಗೆ ಈಗಾಗಲೇ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಆದರೂ, ಅಹಂಕಾರ ಮುಂದುವರೆಸಿರುವ ನಿಮಗೆ ನಿಮ್ಮ ಪಕ್ಷದವರೂ ಒಳಗೊಂಡಂತೆ ಜನರು ಮತ್ತೊಮ್ಮೆ ಪಾಠ ಕಲಿಸಲು ಕಾಯುತ್ತಿದ್ದಾರೆ ನೆನಪಿರಲಿ ಎಂದು ವ್ಯಂಗ್ಯವಾಡಿದ್ದಾರೆ.
ಕಳೆದೊಂದು ವರ್ಷದಲ್ಲಿ 15,000 ಶಿಕ್ಷಕರ ನೇಮಕ, 8,100 ಕೊಠಡಿಗಳ ನಿರ್ಮಾಣ, ಪೌಷ್ಟಿಕ ಆಹಾರ ವಿತರಣೆ, ಅತಿಥಿ ಉಪನ್ಯಾಸಕರು, ಶಿಕ್ಷಕರು, ಬಿಸಿಯೂಟ ಕಾರ್ಯಕರ್ತರ ಗೌರವ ಸಂಭಾವನೆ ಹೆಚ್ಚಳ, ಶಿಕ್ಷಣದ ಸಮಗ್ರ ಸುಧಾರಣೆಗಾಗಿ ಎನ್ಇಪಿ ಅನುಷ್ಠಾನ ಕಾರ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ನಿಮಗೆ ಸಹಿಸಲಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಶಾಲಾ ಮಕ್ಕಳ ಸಮವಸ್ತ್ರ, ನೈತಿಕ ಶಿಕ್ಷಣ ತರಗತಿ, ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೂರಕ ಪೌಷ್ಟಿಕ ಆಹಾರ ವಿತರಣೆ, ಪಠ್ಯ ಪುಸ್ತಕ ಪರಿಷ್ಕರಣೆ ಮುಂತಾದ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸಲು ಪ್ರಯತ್ನ ಮಾಡಿ ವಿಫಲರಾಗಿ ಈಗ ಮತ್ತೊಂದು ಸುಳ್ಳಿನ ಸರ ಪೋಣಿಸಲು ಪ್ರಯತ್ನ ಮಾಡುತ್ತಿರುವಿರಿ. ನಿಮ್ಮ ಸುಳ್ಳುಗಳು ನೀರಿನ ಮೇಲಿನ ಗುಳ್ಳೆಯಂತೆ ಎಂದು ವ್ಯಂಗ್ಯವಾಡಿದ್ದಾರೆ