Advertisement

Editorial: ರೆಪೊ ದರದಲ್ಲಿ ಯಥಾಸ್ಥಿತಿ: ಆರ್‌ಬಿಐ ಜಾಣ್ಮೆಯ ನಡೆ

12:34 PM Apr 06, 2024 | Team Udayavani |

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ಹಣ ಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಿದ್ದು, ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಸತತ ಏಳನೇ ಬಾರಿಗೆ ಆರ್‌ಬಿಐ ರೆಪೊ ದರವನ್ನು ಶೇ. 6.5ರಲ್ಲಿಯೇ ಮುಂದುವರಿಸುವ ಮೂಲಕ ಎಚ್ಚರಿಕೆಯ ನಡೆಯನ್ನು ಇರಿಸಿದೆ. 2023ರ ಫೆಬ್ರವರಿಯಲ್ಲಿ ಆರ್‌ ಬಿಐ ರೆಪೊ ದರದಲ್ಲಿ ಬದಲಾವಣೆ ಮಾಡಿತ್ತು.

Advertisement

ಚಿಲ್ಲರೆ ಹಣದುಬ್ಬರವನ್ನು ಶೇ. 4ರ ಗಡಿಯಲ್ಲಿರಿಸುವ ಗುರಿಯನ್ನು ಆರ್‌ ಬಿಐ ಹಾಕಿಕೊಂಡಿದ್ದು ಫೆಬ್ರವರಿಯಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಿನ ಹೆಚ್ಚಳದಿಂದಾಗಿ ಹಣದುಬ್ಬರ ದರ ಶೇ. 5.1ರಷ್ಟಾಗಿತ್ತು. ಇನ್ನು ಜೂನ್‌ವರೆಗೆ ದೇಶದೆಲ್ಲೆಡೆ ತಾಪಮಾನ ಅಧಿಕವಾಗಿರುವುದರಿಂದ ತರಕಾರಿ ಸಹಿತ ಆಹಾರ ಪದಾರ್ಥಗಳ ಬೆಲೆ ಏರುಗತಿಯಲ್ಲಿರುವ ಸಾಧ್ಯತೆಗಳು ದಟ್ಟವಾಗಿರುವುದು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಆರ್‌ಬಿಐನ ಹಣ ಕಾಸು ನೀತಿ ಪರಾಮರ್ಶೆ ಸಮಿತಿ(ಎಂಪಿಸಿ) ಈ ನಿರ್ಧಾರವನ್ನು ಕೈಗೊಂಡಿದೆ. ತನ್ಮೂಲಕ ದೇಶದ ಆರ್ಥಿಕ ಪ್ರಗತಿ ಮತ್ತು ಸ್ಥಿರತೆಗೆ ಹೆಚ್ಚಿನ ಒತ್ತನ್ನು ನೀಡಿದೆ.

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಪ್ರಗತಿ ಪಥದಲ್ಲಿ ಮುನ್ನಡೆದಿದೆಯಾದರೂ ಸದ್ಯದ ಸ್ಥಿತಿಯಲ್ಲಿ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಿದಲ್ಲಿ ಆರ್ಥಿಕ ಪ್ರಗತಿಯ ನಾಗಾಲೋಟಕ್ಕೆ ತಡೆಯಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂಬ ತೀರ್ಮಾನಕ್ಕೆ ಎಂಪಿಸಿ ಬಂದಿದೆ. ಆರ್ಥಿಕ ತಜ್ಞರು ಮತ್ತು ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆ ಕೂಡ ಇದೇ ಆಗಿತ್ತು.

ಆರ್‌ಬಿಐ ಗವರ್ನರ್‌ ಈ ನಿರ್ಧಾರ ಪ್ರಕಟಿಸಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದ್ದು, ರೂಪಾಯಿ ಮೌಲ್ಯವೂ ಏರಿಕೆಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆ, ಪ್ರಗತಿ, ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತಿರುವ ಚೇತರಿಕೆಯ ವಾತಾವರಣ, ಹಣದುಬ್ಬರ ನಿಯಂತ್ರಣದಲ್ಲಿರುವುದು ಸಹಿತ ಎಲ್ಲ ಸಕಾರಾತ್ಮಕ ಬೆಳವಣಿಗೆಗಳ ಕಾರಣದಿಂದಾಗಿ ಆರ್‌ಬಿಐ ಈ ಬಾರಿಯಾದರೂ ರೆಪೊ ದರದಲ್ಲಿ ಒಂದಿಷ್ಟು ಇಳಿಕೆ ಮಾಡುವ ಮೂಲಕ ಸಾಲಗಾರರಿಗೆ ಅದರಲ್ಲೂ ಮುಖ್ಯವಾಗಿ ಗೃಹ ಸಾಲಗಾರರ ನೆರವಿಗೆ ಬಂದೀತು ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ. ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದಾಗಿ ಸಾಲದ ಕಂತು ಮತ್ತು ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಾಗದು.

ಏತನ್ಮಧ್ಯೆ ಎಂಪಿಸಿ ಹಾಲಿ ಸಭೆಯಲ್ಲಿ ದೇಶೀಯ ಮತ್ತು ಜಾಗತಿಕ ಆರ್ಥಿಕ ಪರಿ ಸ್ಥಿತಿ ಕುರಿತಂತೆಯೂ ಚರ್ಚೆ ನಡೆಸಿದ್ದು, ಆ ಬಳಿಕವೇ ಈ ಎಚ್ಚರಿಕೆಯ ಮತ್ತು ಚಾಣಾಕ್ಷ ನಡೆಯನ್ನು ಇರಿಸಿದೆ. ಇದೇ ವೇಳೆ ಆರ್‌ಬಿಐ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಡಿಜಿಟಲ್‌ ವ್ಯವಹಾರಕ್ಕೆ ಇನ್ನಷ್ಟು ಉತ್ತೇಜನ ನೀಡಲು ಮುಂದಾಗಿದೆ.

Advertisement

ಚಿಲ್ಲರೆ ನೇರ ಹೂಡಿಕೆದಾರರಿಗೆ ಹೊಸ ಮೊಬೈಲ್‌ ಆ್ಯಪ್‌, ನಗದು ಠೇವಣಿಗಾಗಿ ಯುಪಿಐ ಬಳಕೆ ಮತ್ತಿತರ ಯೋಜನೆಗಳನ್ನು ಪ್ರಕಟಿಸಿದೆ. ಒಟ್ಟಿನಲ್ಲಿ ಆರ್‌ಬಿಐ ದೇಶ ಮತ್ತು ಜಾಗತಿಕ ಆರ್ಥಿಕ ದಿಗ್ಗಜ ರಾಷ್ಟ್ರಗಳ ಹಣಕಾಸು ವ್ಯವಸ್ಥೆ, ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸಿ ಯಾವುದೇ ದಿಢೀರ್‌ ಲಾಭದಾಯಕವಾದ ನಿರ್ಧಾರಕ್ಕೆ ಶರಣಾಗದೆ ದೇಶದ ಆರ್ಥಿಕ ಭವಿಷ್ಯವನ್ನು ಗಮನದಲ್ಲಿರಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಮುಂಗಾರು ಋತುವಿನಲ್ಲಿನ ವಿದ್ಯಮಾನಗಳನ್ನು ಅವಲೋಕಿಸಿ ಆಗಸ್ಟ್‌ ವೇಳೆಗಷ್ಟೇ ರೆಪೊ ದರದಲ್ಲಿ ಬದಲಾವಣೆಯನ್ನು ಮಾಡಲು ಚಿಂತನೆ ನಡೆಸಿರುವುದು ಸುಸ್ಪಷ್ಟ.

Advertisement

Udayavani is now on Telegram. Click here to join our channel and stay updated with the latest news.

Next