Advertisement

ಚುನಾವಣೆ ವೇಳೆ ಧರ್ಮ-ರಾಜಕಾರಣದ ಬಂಧ : ಅವಕಾಶವಾದಿ ರಾಜಕೀಯ

09:45 AM Apr 09, 2018 | Karthik A |

ಐವರು ಧಾರ್ಮಿಕ ನಾಯಕರಿಗೆ ಸಹಾಯಕ ಸಚಿವರ ಸ್ಥಾನಮಾನ ಕೊಡುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನಡೆ ಧರ್ಮ ಮತ್ತು ರಾಜಕೀಯದ ನಡುವಿನ ನಂಟಿನ ಕುರಿತಾದ ಚರ್ಚೆಯನ್ನು ತೀವ್ರಗೊಳಿಸಿದೆ. ನಮ್ಮ ಸಂವಿಧಾನ ರಾಜಕೀಯ ಮತ್ತು ಧರ್ಮದ ನಡುವೆ ಸ್ಪಷ್ಟವಾದ ಗೆರೆ ಎಳೆಯದಿದ್ದರೂ ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು ಎಂದು ಹೇಳಿದೆ. ಆದರೆ ಪ್ರಸ್ತುತ ಪರಿಸ್ಥಿತಿ ಉಲ್ಟಾ ಆಗಿದ್ದು, ರಾಜಕೀಯದಲ್ಲಿ ಧರ್ಮ ಅತಿ ಎನ್ನುವಂತೆ ಬೆರೆಯುತ್ತಿದೆ. ಹಿಂದೆ ಧಾರ್ಮಿಕ ನೆಲೆಯಲ್ಲಿ ಅಲ್ಪಸಂಖ್ಯಾಕರೆಂದು ಗುರುತಿಸಿಕೊಂಡವರ ಮತಗಳಿಗಾಗಿ ರಾಜಕೀಯ ಪಕ್ಷಗಳು ಮೇಲಾಟ ನಡೆಸುತ್ತಿದ್ದರೆ ಈಗ ಬಹುಸಂಖ್ಯಾತರ ಮತಗಳಿಗಾಗಿ ಪೈಪೋಟಿಗಿಳಿದಿವೆ. ಈ ಮತಗಳಿಗಾಗಿ ಬಹುಸಂಖ್ಯಾಕರ ಧಾರ್ಮಿಕ ಸ್ಥಳಗಳಿಗೆ ಎಡತಾಕುತ್ತಿವೆ. ಗುಜರಾತ್‌ ಚುನಾವಣೆ ಸಮಯದಲ್ಲಿ ಜಾತ್ಯತೀತ ಎಂದು ಹೇಳಿಕೊಳ್ಳುತ್ತಿರುವ ಪಕ್ಷದ ನಾಯಕರು ಹಿಂದು ಮತಗಳಿಗಾಗಿ ಕಂಡಕಂಡ ದೇವಾಲಯಗಳಿಗೆ ಭೇಟಿ ನೀಡಿ ಕೈಮುಗಿದರು. ಇನ್ನೊಂದು ಪಕ್ಷದವರೂ ತಾವೇನು ಕಮ್ಮಿ ಎಂದು ಇನ್ನೊಂದಷ್ಟು ದೇವಸ್ಥಾನಗಳಿಗೆ ಹೋದರು.

Advertisement

ಇದೀಗ ರಾಜ್ಯದ ಚುನಾವಣೆಯಲ್ಲೂ ದೇವಾಲಯಗಳಿಗೆ ಭೇಟಿ ನೀಡಲು ಮತ್ತು ಧಾರ್ಮಿಕ ಮುಖಂಡರ ಆಶೀರ್ವಾದ ಪಡೆದುಕೊಳ್ಳಲು ನಾಯಕರ ನಡುವೆ ಸ್ಪರ್ಧೆಯೇ ನಡೆಯುತ್ತಿದೆ. ಚುನಾವಣೆ ಪ್ರಚಾರ ಮಾಡಲು ಬರುವ ಎಲ್ಲ ನಾಯಕರೂ ಮಠಮಂದಿರಗಳಿಗೆ ಹೋಗಿ ಸ್ವಾಮೀಜಿಗಳ ಪಾದಕ್ಕೆರಗುವ ದೃಶ್ಯ ನಿತ್ಯ ಕಾಣಸಿಗುತ್ತಿದೆ. ಎಲ್ಲರಿಗೂ ಬಹುಸಂಖ್ಯಾತರನ್ನು ಮೆಚ್ಚಿಸುವ ಧಾವಂತ. ಈ ಧಾವಂತದಲ್ಲಿ ದೇವಸ್ಥಾನಗಳತ್ತ ತಿರುಗಿ ನೋಡದವರು ಕೂಡ ಈಗ ಹೋಗಿ ಕೈಮುಗಿಯುತ್ತಿರುವುದು ಪರಿಸ್ಥಿತಿಯ ವಿಡಂಬನೆಯಂತಿದೆ. ಧರ್ಮದ ನೆಲೆಯಲ್ಲಿ ಮತ ಯಾಚಿಸಬಾರದು ಎಂದು ಸರ್ವೋಚ್ಛ ನ್ಯಾಯಾಲಯವೇ ಹೇಳಿದೆ. ಆದರೆ ದೇವಸ್ಥಾನಗಳಿಗೆ ಅಥವಾ ಮಸೀದಿಗಳಿಗೆ ಹೋಗಿ ಪರೋಕ್ಷವಾಗಿ ಮತ ಬುಟ್ಟಿಗೆ ಹಾಕಿಕೊಳ್ಳುವುದು ರಾಜಕೀಯಕ್ಕೆ ಧರ್ಮದ ಬಳಕೆಯಲ್ಲವೆ? 

ಇನ್ನು ಮಧ್ಯ ಪ್ರದೇಶದ ವಿಚಾರಕ್ಕೆ ಬರುವುದಾದರೆ ಸಚಿವ ಪದವಿಯ ಸ್ಥಾನಮಾನ ಪಡೆದುಕೊಂಡಿರುವ ಐವರು ಮಹಾಂತರು ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ನರ್ಮದಾ ಘೋಟಾಲ ರಥ ಯಾತ್ರೆಯನ್ನು ನಡೆಸುವುದಾಗಿ ಹೇಳಿದ್ದರು. ಅಂತೆಯೇ ನರ್ಮದಾ ನದಿಯ ದಂಡೆಯುದ್ದಕ್ಕೂ ಗಿಡಗಳನ್ನು ನೆಡುತ್ತೇವೆ ಎಂದಿರುವ ಮುಖ್ಯಮಂತ್ರಿಯ ಭರವಸೆಯ ಪೊಳ್ಳುತನವನ್ನು ಬಯಲಿಗೆಳೆಯುತ್ತೇವೆ ಎಂದು ಘೋಷಿಸಿದ್ದರು. ಮಧ್ಯಪ್ರದೇಶ ವಿಧಾನಸಭೆಗೆ ಇನ್ನು ಏಳು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಸಾಕಷ್ಟು ಜನಪ್ರಿಯರೂ ಆಗಿರುವ ಈ ಐವರು ಸಾಧು ಸಂತರು ತನ್ನ ವಿರುದ್ಧ ಅಭಿಯಾನ ನಡೆಸಿದರೆ ಕಷ್ಟ ಎಂದು ಮನಗಂಡ ಚೌಹಾಣ್‌ ವಿರೋಧಿಸುವವರನ್ನೇ ಅಧಿಕಾರಪೀಠದಲ್ಲಿ ಕುಳ್ಳಿರಿಸುವ ಜಾಣ ನಡೆ ಅನುಸರಿಸಿದರು. ಸ್ಥಾನಮಾನ ಸಿಕ್ಕಿದ ಕೂಡಲೇ ಮಹಾಂತರು ಕೂಡಾ ಯಾತ್ರೆಯನ್ನು ಕೈಬಿಟ್ಟು ಸದ್ಯಕ್ಕೆ ರಾಜ್ಯದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದಾರೆ. ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ್ದು ಇಂದಿರಾ ಗಾಂಧಿ ಎಂದು ಹೇಳುತ್ತಾರೆ. ಈಗ ಚೌಹಾಣ್‌ ಕೂಡಾ ಮಾಡಿರುವುದು ಅದನ್ನೇ ಅಲ್ಲವೆ? ರಾಜಕಾರಣಿಯಾಗಿ ಚೌಹಾಣ್‌ ಹೀಗೆ ಮಾಡಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಧಾರ್ಮಿಕ ಮುಖಂಡರಾಗಿ ಮಹಾಂತರು ಈ ಕೊಡುಗೆಯನ್ನು ಸ್ವೀಕರಿಸಿ ಹೋರಾಟವನ್ನು ಕೈಬಿಟ್ಟದ್ದು ನೈತಿಕ ಅಧಃಪತನವೆಂದೇ ಹೇಳಬೇಕಾಗುತ್ತದೆ.

ಹಾಗೆಂದು ಧಾರ್ಮಿಕ ಮುಖಂಡರಾದವರು ರಾಜಕೀಯಕ್ಕೆ ಬರಬಾರದು ಎಂದಲ್ಲ.ಈಗಾಗಲೇ ಹಲವು ಧಾರ್ಮಿಕ ನಾಯಕರು ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯೇ ಧಾರ್ಮಿಕ ಮುಖಂಡ. ಐದು ಸಲ ಸಂಸದರಾಗಿರುವ ರಾಜಕೀಯ ಅನುಭವವೂ ಅವರಿಗಿದೆ. ಸಾಕ್ಷಿ ಮಹಾರಾಜ್‌ ಸೇರಿದಂತೆ ಹಲವು ಧಾರ್ಮಿಕ ನಾಯಕರು ಸಂಸದರಾಗಿದ್ದಾರೆ. ರಾಜ್ಯದಲ್ಲೂ ಹಲವು ಧಾರ್ಮಿಕ ನಾಯಕರು ರಾಜಕೀಯಕ್ಕೆ ಧುಮುಕಲು ವೇದಿಕೆ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಓರ್ವ ಸ್ವಾಮೀಜಿ ರಾಜಕೀಯ ಪ್ರವೇಶದ ಘೋಷಣೆ ಮಾಡಿಯಾಗಿದೆ. ಆದರೆ ಸಚಿವ ಸ್ಥಾನಮಾನ ಪಡೆದುಕೊಂಡ ಮಹಾಂತರ ಪೈಕಿ ಒಬ್ಬರು ಕೆಲ ದಿನಗಳ ಹಿಂದಿನ ತನಕವೂ ಪ್ರತಿಪಕ್ಷದ ಹಿರಿಯ ನಾಯಕರೊಬ್ಬರ ಜತೆಗಿದ್ದರು. ರಾಜ್ಯಸಭೆ ಚುನಾವಣೆ ವೇಳೆ ಅವರು ಇನ್ನೊಂದು ಪಕ್ಷದಿಂದ ಟಿಕೇಟ್‌ ಕೂಡಾ ಕೇಳಿದ್ದರಂತೆ. ಅಲ್ಲಿ ಬೇಳೆ ಬೇಯದ ಕಾರಣ ಈಗ ಸರಕಾರದ ಜತೆಗೆ ಸೇರಿಕೊಂಡಿದ್ದಾರೆ. ಹೀಗೆ ವೃತ್ತಿಪರ ರಾಜಕಾರಣಿಗಳಿಗಿಂತಲೂ ಹೆಚ್ಚು ಅವಕಾಶವಾದಿಗಳಾಗಿ ಬರುವ ಧಾರ್ಮಿಕ ಮುಖಂಡರಿಂದ ಇದನ್ನು ನಿರೀಕ್ಷಿಸಬಹುದೆ?

Advertisement

Udayavani is now on Telegram. Click here to join our channel and stay updated with the latest news.

Next