ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ವು ಹೊಸದಾಗಿ ಆರೋಗ್ಯ ವಿಮಾ ಪಾಲಿಸಿಗಳನ್ನು ಹೊಂದ ಬಯಸುವ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಇದ್ದ 65 ವರ್ಷದ ಗರಿಷ್ಠ ವಯೋಮಿತಿಯನ್ನು ರದ್ದುಗೊಳಿಸಿರುವ ಪ್ರಾಧಿಕಾರ ಎಲ್ಲ ವಯೋಮಿತಿಯವರೂ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಬಹುದು ಎಂದು ಘೋಷಿಸಿದೆ. ಐಆರ್‌ಡಿಎಐಯ ಈ ನಿರ್ಧಾರದಿಂದ ದೇಶದ ಲಕ್ಷಾಂತರ ಹಿರಿಯ ನಾಗರಿಕರ ಬಹುದಿನಗಳ ಬೇಡಿಕೆಗೆ ಸ್ಪಂದನೆ ಲಭಿಸಿದಂತಾಗಿದೆ.
ವಿಮಾ ಪ್ರಾಧಿಕಾರದ ಈ ತೀರ್ಮಾನದಿಂದ ನಾನಾ ಕಾರಣಗಳಿಂದಾಗಿ ಈವರೆಗೆ ಆರೋಗ್ಯ ವಿಮೆ ಪಾಲಿಸಿಯನ್ನು ಮಾಡಿಸಲು ಸಾಧ್ಯವಾಗದ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೊಸದಾಗಿ ಆರೋಗ್ಯ ವಿಮೆಯನ್ನು ಮಾಡಿಸಲು ಅವಕಾಶ ಲಭಿಸಿದೆ. ಎಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಐಆರ್‌ಡಿಎಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರಿಂದಾಗಿ ಅನಿರೀಕ್ಷಿತ ವೈದ್ಯಕೀಯ ವೆಚ್ಚವನ್ನು ನಿಭಾಯಿಸಲು ಅನುಕೂಲವಾಗುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಆರೋಗ್ಯ ವಿಮಾ ಸೇವೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆಯಲ್ಲದೆ ಎಲ್ಲರನ್ನೂ ಆರೋಗ್ಯ ವಿಮಾ ಕಕ್ಷೆಯೊಳಗೆ ಸೇರ್ಪಡೆಗೊಳಿಸಲು ಉತ್ತೇಜನ ನೀಡಿದಂತಾಗಿದೆ.
ಈವರೆಗೆ ಜಾರಿಯಲ್ಲಿದ್ದ ವಯೋಮಿತಿ ನಿರ್ಬಂಧದಿಂದಾಗಿ ಯಾರಿಗೆ ಆರೋಗ್ಯ ವಿಮಾ ಸೌಲಭ್ಯದ ಅಗತ್ಯವಿದೆಯೋ ಅವರು ಅದರಿಂದ ವಂಚಿತ ರಾಗುವಂತಾಗಿತ್ತಲ್ಲದೆ ಈ ಸೌಲಭ್ಯ ಸೀಮಿತ ಜನರಿಗಷ್ಟೇ ಲಭ್ಯವಾಗುತ್ತಿತ್ತು. ಇದರಿಂದಾಗಿ ಆರೋಗ್ಯ ವಿಮೆಯ ನೈಜ ಉದ್ದೇಶ ಈಡೇರದೆ ಕೇವಲ ವಾಣಿಜ್ಯಿಕ ಉದ್ದೇಶಕ್ಕೇ ಆದ್ಯತೆ ನೀಡಿದಂತಾಗಿತ್ತು. ಆರೋಗ್ಯ ವಿಮಾ ಸೇವೆಗಳನ್ನು ಒದಗಿಸುವ ಕಂಪೆನಿಗಳು ಕೂಡ ಜನರಿಗೆ ವಿವಿಧ ಷರತ್ತುಗಳನ್ನು ಹಾಕಿ ಪಾಲಿಸಿ ಮಾಡಿಸಲು ನಿರಾಕರಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಆರೋಗ್ಯ ವಿಮೆ ಮಾಡಲು ಇರುವ ಗರಿಷ್ಠ ವಯೋಮಿತಿಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನು ಹಿರಿಯ ನಾಗರಿಕರು ವಿಮಾ ಪ್ರಾಧಿಕಾರದ ಮುಂದಿಡುತ್ತಲೇ ಬಂದಿದ್ದರು.
60 ವರ್ಷ ಮೇಲ್ಟಟ್ಟ ಬಳಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾದ್ದರಿಂದ ವಿಮಾ ಕಂಪೆನಿಗಳು ಹೊಸದಾಗಿ ಆರೋಗ್ಯ ವಿಮೆ ಮಾಡಿಸಲು ಅವಕಾಶ ಕಲ್ಪಿಸಿಕೊಡಲು ಆಸಕ್ತಿ ತೋರಿರಲಿಲ್ಲ. ಒಂದು ವೇಳೆ ವಿಮಾ ಪಾಲಿಸಿ ಮಾಡಿಸಲು ಮುಂದೆ ಬರುವ ಗ್ರಾಹಕರಿಗೆ ವಿವಿಧ ಪೂರ್ವ ಷರತ್ತುಗಳು ಮತ್ತು ಅವರ ಹಾಲಿ ವೈದ್ಯಕೀಯ ಸ್ಥಿತಿಗತಿಯ ಬಗೆಗೆ ಪ್ರಮಾಣಪತ್ರ ಮತ್ತಿತರ ನೆಪಗಳನ್ನು ಮುಂದೊಡ್ಡಿ ಪಾಲಿಸಿ ಮಾಡಿಸಲು ಹಿಂದೇಟು ಹಾಕುತ್ತಿದ್ದವು. ಈಗ ಐಆರ್‌ಡಿಎಐ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದು ಯಾವುದೇ ವಯೋ ನಿರ್ಬಂಧವಿಲ್ಲದೆ ಎಲ್ಲರಿಗೂ ಆರೋಗ್ಯ ವಿಮಾ ಪಾಲಿಸಿಗಳನ್ನು ಮುಕ್ತವಾಗಿ ನೀಡಬೇಕು ಎಂದು ಸ್ಪಷ್ಟವಾಗಿ ವಿಮಾ ಕಂಪೆನಿಗಳಿಗೆ ನಿರ್ದೇಶನ ನೀಡಿದೆ. ಇದೇ ವೇಳೆ ವಿಮಾ ಪಾಲಿಸಿದಾರರ ಪೂರ್ವ ವೈದ್ಯಕೀಯ ಮಾಹಿತಿ ಪಡೆದು, ಆರೋಗ್ಯ ವಿಮಾ ಪಾಲಿಸಿ ನೀಡಲು ನಿರಾಕರಿಸುವ ವಿಮಾ ಕಂಪೆನಿಗಳ ದಾಷ್ಟ್ರ್ಯತನವನ್ನೂ ಗಂಭೀರವಾಗಿ ಪರಿಗಣಿಸಿರುವ ಐಆರ್‌ಡಿಎಐ, ಗಂಭೀರ ವೈದ್ಯಕೀಯ ಸಮಸ್ಯೆಗಳ ಸಹಿತ ಯಾವುದೇ ತೆರನಾದ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೂ ಯಾವುದೇ ಷರತ್ತು ವಿಧಿಸದೆ ತಮ್ಮ ತಮ್ಮ ಆರೋಗ್ಯ ವಿಮಾ ಉತ್ಪನ್ನಗಳ ನಿಯಮಾವಳಿಗಳಿಗನುಸಾರವಾಗಿ ಆರೋಗ್ಯ ವಿಮೆ ಪಾಲಿಸಿಯನ್ನು ಮಾಡಿಸಲು ಎಲ್ಲರಿಗೂ ಅವಕಾಶ ಮಾಡಿಕೊಡಬೇಕು ಎಂದು ಕಟ್ಟಪ್ಪಣೆ ಮಾಡಿದೆ. ಈ ಮೂಲಕ ಆಕಸ್ಮಿಕವಾಗಿ ಎದುರಾಗುವ ವೈದ್ಯಕೀಯ ವೆಚ್ಚವನ್ನು ತಾಳಿಕೊಳ್ಳಲು ಹಿರಿಯ ನಾಗರಿಕರು ಮತ್ತವರ ಕುಟುಂಬದವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಐಆರ್‌ಡಿಎಐಯ ಈ ನಿರ್ಧಾರದಿಂದ ದೇಶದಲ್ಲಿ ಆರೋಗ್ಯ ವಿಮಾ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗೆ ನಾಂದಿ ಹಾಡಿದಂತಾಗಿದೆ.