ಬಂದ್‌ಗೆ ಕರೆ ನೀಡುವುದೇ ಹಾಸ್ಯಾಸ್ಪದ ವಿಚಾರ ಆಗಬಾರದು. ಒಂದು ಉತ್ತಮ ಉದ್ದೇಶಕ್ಕಾಗಿ ಬಂದ್‌ಗೆ ಕರೆ ನೀಡಿದ ಮೇಲೆ, ಎಲ್ಲರನ್ನೂ ಜತೆಗೆ ಕರೆದೊಯ್ಯುವ ಮನಸ್ಸು ಕೂಡ ಇರಬೇಕು. ಬೆಂಗಳೂರಷ್ಟೇ ಅಲ್ಲ, ರಾಜ್ಯದ
ಕೆಲವೊಂದು ಜಿಲ್ಲೆಗಳಲ್ಲಿ ಬಂದ್‌ಗೆ ಯಾವುದೇ ರೀತಿಯಲ್ಲೂ ಬೆಂಬಲ ಸಿಕ್ಕಿಲ್ಲ. ಉತ್ತರ ಕರ್ನಾಟಕದ ಯಾವುದೇ
ಭಾಗದಲ್ಲೂ ಬಂದ್ ನಡೆಯಲಿಲ್ಲ.
ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಕನ್ನಡ ಪರ ಸಂಘಟನೆಗಳು ಕರೆದಿದ್ದ ರಾಜ್ಯವ್ಯಾಪಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ, ಅಲ್ಲಲ್ಲಿ ಪ್ರತಿಭಟನೆ ನಡೆದದ್ದು ಬಿಟ್ಟರೆ ಬಂದ್‌ನಿಂದಾಗಿ ಯಾರಿಗೂ ಬಿಸಿ ತಾಗಿಲ್ಲ. ಇದರ ನಡುವೆಯೇ ಒಂದೆರಡು ಕಡೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿರುವ ವರದಿಯೂ ಆಗಿದೆ. ಬಂದ್ ಹೆಸರಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.
ಇದೆಲ್ಲದರ ನಡುವೆಯೇ ಗುರುವಾರ ಬಂದ್‌ಗೆ ಕರೆ ನೀಡಿದ್ದೇಕೆ ಎಂಬ ಪ್ರಶ್ನೆಗಳು ಜನರಲ್ಲಿ ಮೂಡತೊಡಗಿವೆ. ಒಂದಂತೂ ಸತ್ಯ, ಕನ್ನಡ ಪರ ಸಂಘಟನೆಗಳಲ್ಲಿ ಒಗ್ಗಟ್ಟು ಮೂಡದ ಹೊರತು ಕನ್ನಡಕ್ಕಾಗಿ ಮಾಡುವ ಯಾವುದೇ ಕೆಲಸಗಳು ಈಡೇರುವುದಿಲ್ಲ ಎಂಬ ಅಂಶವನ್ನು ಸಂಘಟನೆಗಳು ಅರಿತುಕೊಳ್ಳಬೇಕು. ಇಂಥ ಹೋರಾಟಗಳನ್ನು ನಡೆಸುವಾಗ ಕನಿಷ್ಠ ಪಕ್ಷ ರಾಜ್ಯದಲ್ಲಿ ಇರುವ ಕನ್ನಡ ಪರ ಸಂಘಟನೆಗಳ ನಾಯಕರೆಲ್ಲಾ ಕುಳಿತು, ಯೋಚಿಸಿ ಮುಂದಡಿ ಇಡುವುದು ಉತ್ತಮ. ಸಂಘಟನೆಗಳ ನಡುವೆಯೇ ಒಗ್ಗಟ್ಟಿಲ್ಲ ಎಂಬುದು ಗುರುವಾರ ಬೆಳಗ್ಗೆ ಕೆಲವು ಕನ್ನಡ ಸಂಘಟನೆಗಳ ಕಾರ್ಯಕರ್ತರು ಬಂದ್‌ನಲ್ಲಿ ಭಾಗವಹಿಸದವರಿಗೆ ಗುಲಾಬಿ ಹೂ ನೀಡಿ ಸತ್ಕರಿಸಿದಾಗ ಸಾಬೀತಾಗಿದೆ.
ಹೀಗಾಗಿ ಎಲ್ಲೋ ಒಂದು ಕಡೆ ಬಂದ್‌ಗೆ ಕರೆ ನೀಡುವುದೇ ಹಾಸ್ಯಾಸ್ಪದ ವಿಚಾರವಾಗಬಾರದು. ಒಂದು ಉತ್ತಮ ಉದ್ದೇಶಕ್ಕಾಗಿ ಬಂದ್‌ಗೆ ಕರೆ ನೀಡಿದ ಮೇಲೆ, ಎಲ್ಲರನ್ನೂ ಜತೆಗೆ ಕರೆದೊಯ್ಯುವ ಮನಸ್ಸು ಕೂಡ ಇರಬೇಕು. ಬೆಂಗಳೂರಷ್ಟೇ ಅಲ್ಲ, ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಬಂದ್‌ಗೆ ಯಾವುದೇ ರೀತಿಯಲ್ಲೂ ಬೆಂಬಲ ಸಿಕ್ಕಿಲ್ಲ. ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲೂ ಬಂದ್ ನಡೆಯಲಿಲ್ಲ. ಇನ್ನೂ ಕೆಲವು ಕಡೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವ ಪ್ರಯತ್ನಕ್ಕೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದರೆ ಬಂದ್‌ಗೆ ಕರೆ ನೀಡಿದ್ದ ಕನ್ನಡ ಸಂಘಟನೆಗಳು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇಷ್ಟೆಲ್ಲಾ ಸಂಗತಿಗಳ ನಡುವೆಯೇ ಬಂದ್‌ಗೆ ಕರೆ ನೀಡುವವರು ಮಕ್ಕಳ ಪರೀಕ್ಷೆ ಬಗ್ಗೆಯೂ ಯೋಚನೆ ಮಾಡಬೇಕು. ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳೆಂದರೆ ಮಕ್ಕಳ ಪರೀಕ್ಷೆ ಕಾಲ. ಈಗಾಗಲೇ ಪ್ರಥಮ ಪಿಯುಸಿಯೂ ಸೇರಿದಂತೆ ಕೆಲವು ಪದವಿ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಇಂಥ ಬಂದ್‌ನಿಂದಾಗಿ ಮಕ್ಕಳು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳೂ ಗೊಂದಲಕ್ಕೀಡಾಗುತ್ತಾರೆ. ಪರೀಕ್ಷೆ ಮುಂದೂಡುವುದೋ ಅಥವಾ ಬೇಡವೋ, ಬಂದ್ ಆಗುತ್ತೋ, ಇಲ್ಲವೋ ಎಂಬ ಗೊಂದಲಗಳಿಂದಾಗಿ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ಏಕಾಏಕಿ ಬಂದ್‌ಗೆ ಕರೆ ನೀಡುವ ಮುನ್ನ, ಯಾರಿಗೆಲ್ಲಾ ತೊಂದರೆಯಾಗುತ್ತದೆ, ಯಾವ ರೀತಿ ತೊಂದರೆಯಾಗುತ್ತದೆ ಎಂಬುದನ್ನು ಅರಿಯುವುದು ಸೂಕ್ತ.
ಸರೋಜಿನಿ ಮಹಿಷಿ ವರದಿ ಜಾರಿ ವಿಚಾರವೂ ಅಷ್ಟೇ. ರಾಜ್ಯದ ಪಾಲಿಗೆ ಇದೊಂದು ಗಂಭೀರವಾದ ವಿಚಾರ. ಸರೋಜಿನಿ ಮಹಿಷಿ ಅವರು ವರದಿ ಕೊಟ್ಟ ಮೇಲೆ ಹಲವಾರು ಸರ್ಕಾರಗಳು ಬಂದಿವೆ, ಹೋಗಿವೆ. ಆದರೂ ಇದುವರೆಗೂ ಈ ವರದಿ ಜಾರಿಯಾಗಿಯೇ ಇಲ್ಲ. ಇಂಥ ಹೋರಾಟ ಮಾಡಿದಾಗ ಆಗ ಅಧಿಕಾರದಲ್ಲಿರುವ ನಾಯಕರು ಇನ್ನೇನು ಜಾರಿ ಮಾಡಿಯೇ ಬಿಡುತ್ತೇವೆ ಎನ್ನುತ್ತಾರೆ, ನಂತರ ಮರೆತೇ ಬಿಡುತ್ತಾರೆ.
ಸರೋಜಿನಿ ಮಹಿಷಿ ಅವರು 1984ರಲ್ಲಿ ನೀಡಿದ್ದ ವರದಿ ಇದು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿನ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದು ಈ ವರದಿಯ ಪ್ರಮುಖಾಂಶ. ಒಟ್ಟಾರೆಯಾಗಿ 58 ಶಿಫಾರಸುಗಳನ್ನು ಸಲ್ಲಿಕೆ ಮಾಡಲಾಗಿತ್ತು. ಕೇಂದ್ರವಾಗಲಿ, ರಾಜ್ಯವಾಗಲಿ, ಖಾಸಗಿ ವಲಯವಾಗಲಿ ಎಲ್ಲೆಡೆ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದು ಈ ವರದಿಯ ಪ್ರಮುಖ ಆಶಯವಾಗಿತ್ತು. ಆದರೆ, ವರದಿ ನೀಡಿ ಅಂದಾಜು 36 ವರ್ಷಗಳಾಗಿವೆ. ಇನ್ನೂ ಮೀಸಲಾತಿ ಜಾರಿಗೆ ಬಂದಿಲ್ಲ ಎಂಬುದು ಮಾತ್ರ ವಿಪರ್ಯಾಸ.