Advertisement

ಇಸ್ರೇಲ್‌-ಭಾರತ ಸಹಭಾಗಿತ್ವ ಪ್ರಯತ್ನ ಫ‌ಲಿಸಲಿ

09:03 AM May 27, 2020 | Hari Prasad |

ಜಗತ್ತಿನಾದ್ಯಂತ ಕೋವಿಡ್‌-19 ಹಾವಳಿ ಹೆಚ್ಚುತ್ತಲೇ ಇರುವ ವೇಳೆಯಲ್ಲೇ ಈ ವೈರಸ್‌ ವಿರುದ್ಧ ಲಸಿಕೆ ಕಂಡುಹಿಡಿಯಲು, ತ್ವರಿತ ಸೋಂಕು ಪತ್ತೆ ಪರೀಕ್ಷಣಾ ಕಿಟ್‌ಗಳನ್ನು ತಯಾರಿಸಲು ಅನೇಕ ರಾಷ್ಟ್ರಗಳು ವ್ಯಸ್ತವಾಗಿವೆ. ಈ ಸಾಲಿನಲ್ಲಿ ಭಾರತವೂ ಗಮನಾರ್ಹ ಪ್ರಯತ್ನ ನಡೆಸಿದೆ.

Advertisement

ಈಗ ಭಾರತ ಮತ್ತು ಇಸ್ರೇಲ್‌ನ ಆರೋಗ್ಯ ಪರಿಣತರು ಜಂಟಿಯಾಗಿ ರ್ಯಾಪಿಡ್‌ ಟೆಸ್ಟಿಂಗ್‌ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ತೊಡಗಲಿದ್ದು, ಅತ್ಯಂತ ತ್ವರಿತಗತಿಯಲ್ಲಿ ಕೋವಿಡ್‌-19 ಟೆಸ್ಟ್‌ ನಡೆಸುವ ಸಾಧನಗಳನ್ನು ಅನ್ವೇಷಿಸುವ ಉದ್ದೇಶ ಇದರ ಹಿಂದಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಇಸ್ರೇಲ್‌ ಮತ್ತು ಭಾರತದ ನಡುವಿನ ಅತಿಮುಖ್ಯ ಸಂಶೋಧನೆ ಮತ್ತು ಅಭಿವೃದ್ಧಿ ಸಹಭಾಗಿತ್ವವೂ ಇದಾಗಿದೆ ಎನ್ನುವುದು ವಿಶೇಷ. ಈ ಕಾರ್ಯಕ್ರಮದಲ್ಲಿ ಡಿಆರ್‌ಡಿಒ ಮತ್ತು ಕೌನ್ಸಿಲ್‌ ಫಾರ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ (ಸಿಎಸ್‌ಐಆರ್‌)ನಂಥ ದೇಶದ ಪ್ರತಿಷ್ಠಿತ ಸಂಸ್ಥೆಗಳು ಭಾಗಿಯಾಗಲಿರುವುದು ವಿಶೇಷ. 2018ರಲ್ಲಿ ಭಾರತ ಮತ್ತು ಇಸ್ರೇಲ್‌ನ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಭಾಗಿತ್ವದ ಬಗ್ಗೆ ಮಹತ್ವದ ಒಪ್ಪಂದಗಳಾಗಿದ್ದವು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಇದೇನೇ ಇದ್ದರೂ ಕೋವಿಡ್ ಜಗತ್ತನ್ನು ಬಹುವಾಗಿ ಕಾಡುತ್ತಿರುವ ನಡುವೆಯೇ, ಜಗದಗಲ ಅಭೂತಪೂರ್ವ ಪ್ರಮಾಣದಲ್ಲಿ ಸಂಶೋಧನೆಗಳೂ ನಡೆದಿವೆ. ಭಾರತದ ವಿಷಯಕ್ಕೇ ಬಂದರೆ, ರ್ಯಾಪಿಡ್‌ ಟೆಸ್ಟಿಂಗ್‌ ಕಿಟ್‌ಗಳ ಅಭಿವೃದ್ಧಿ ಪ್ರಯತ್ನಗಳಷ್ಟೇ ಅಲ್ಲದೇ, ಕೋವಿಡ್ ವಿರುದ್ಧ ಲಸಿಕೆ ಕಂಡುಹಿಡಿಯುವ ವಿಚಾರದಲ್ಲೂ, ದೇಶದ ಸಂಸ್ಥೆಗಳು ಶ್ರಮಿಸುತ್ತಿವೆ.

ಸೀರಂ ಇನ್ಸ್‌ಟಿಟ್ಯೂಟ್‌, ಬಯೋಕಾನ್‌ ಸೇರಿದಂತೆ ಹಲವಾರು ಕಂಪೆನಿಗಳು ಲಸಿಕೆ ಸಂಶೋಧನೆಯಲ್ಲಿ ವ್ಯಸ್ತವಾಗಿವೆ. ಯಶಸ್ವಿಯಾಗಿ ಯಾವ ದೇಶ ಲಸಿಕೆ ಕಂಡುಹಿಡಿಯುತ್ತದೋ ತಿಳಿಯದು. ಆದರೆ ಯಶಸ್ವಿಯಾದರೆ, ಭಾರೀ ಪ್ರಮಾಣದಲ್ಲಿ ಲಸಿಕೆಗಳ ಡೋಸ್‌ಗಳನ್ನು ಉತ್ಪಾದಿಸುವ ವಿಚಾರದಲ್ಲೂ ಭಾರತದ ಕೊಡುಗೆ ಇದ್ದೇ ಇರಲಿದೆ.

Advertisement

ಏಕೆಂದರೆ, ಇಂದು ಭಾರತ ಜಗತ್ತಿನ ಅತಿದೊಡ್ಡ ಲಸಿಕೆ ಉತ್ಪಾದನಾ ಕೇಂದ್ರವಾಗಿದ್ದು, ಜಗತ್ತಿನಾದ್ಯಂತ ಈಗಾಗಲೇ ಬಳಕೆಯಾಗುತ್ತಿರುವ ಲಸಿಕೆಗಳಲ್ಲಿ 70 ಪ್ರತಿಶತ ಲಸಿಕೆಗಳು ಭಾರತದಲ್ಲೇ ತಯಾರಾಗುತ್ತವೆ. ಇಂಟರ್‌ನ್ಯಾಶನಲ್‌ ವ್ಯಾಕ್ಸಿನ್‌ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕ, ಪ್ರಖ್ಯಾತ ಸಂಶೋಧಕ ಡಾ| ಜಿರೋಮ್‌ ಕಿಮ್‌ ಕೂಡ, ಮುಂದಿನ ದಿನಗಳಲ್ಲಿ ಭಾರತದ ಲಸಿಕೆ ಉತ್ಪಾದನಾ ಉದ್ಯಮ ಮಹತ್ತರ ಪಾತ್ರ ನಿರ್ವಹಿಸಲಿದೆ ಎನ್ನುತ್ತಿದ್ದಾರೆ.

ಆದರೂ ಎಚ್‌ಐವಿಯಂತೆಯೇ ಕೋವಿಡ್ಗೂ ಲಸಿಕೆ ಸಿಗದೇ ಹೋಗಬಹುದು ಎನ್ನುವ ಎಚ್ಚರಿಕೆಯ ಧ್ವನಿಯೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಬರುತ್ತಿದೆ. ಇದೇನೇ ಇದ್ದರೂ ಪರೀಕ್ಷೆಗಳ ಪ್ರಮಾಣವಂತೂ ಅಧಿಕವಿದ್ದರೆ, ರೋಗ ಹರಡುವಿಕೆಯನ್ನು ತಡೆಯಲು ಸಹಾಯವಾಗುತ್ತದೆ.

ಜೂನ್‌-ಜುಲೈ ತಿಂಗಳ ವೇಳೆಗೆ ದೇಶದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಉತ್ತುಂಗಕ್ಕೇರಲಿದೆ ಎಂದು ವೈಜ್ಞಾನಿಕ ವಲಯ ಎಚ್ಚರಿಸುತ್ತಿದೆ. ಹೀಗಾಗಿ ವ್ಯಾಪಕ ಟೆಸ್ಟಿಂಗ್‌ಗಳನ್ನು ನಡೆಸುವುದು, ಟೆಸ್ಟಿಂಗ್‌ಗೆ ಸರಳ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಭಾರತವು ನಡೆಸುತ್ತಿರುವ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸೋಣ.

Advertisement

Udayavani is now on Telegram. Click here to join our channel and stay updated with the latest news.

Next