Advertisement
ಆದರೆ ಇದೇ ವೇಳೆಯಲ್ಲೇ ಅನೇಕ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಪ್ರಮಾಣವು ವೇಗವಾಗಿ ಬೆಳೆಯುತ್ತಿರುವ ರೀತಿ ಬೆಚ್ಚಿಬೀಳಿಸುವಂತಿದೆ.
Related Articles
Advertisement
ಅಲ್ಲದೇ ಸೋಂಕಿತರ ಸಂಖ್ಯೆಯ ವಿಷಯದಲ್ಲೂ ಭಾರತದಲ್ಲಿ ಸ್ಥಿತಿ ಅಷ್ಟು ವಿಷಮವಾಗಿ ಬದಲಾಗಿಲ್ಲ. ಆದರೆ, ರೋಗ ನಿಯಂತ್ರಣಕ್ಕೆ ಆಡಳಿತಗಳಿಗೆ, ಸಾರ್ವಜನಿಕರ ಸಹಕಾರ ಅತ್ಯಗತ್ಯ. ತಿಳಿದೂ ತಿಳಿದೂ ಪರಿಸ್ಥಿತಿಯನ್ನು ಜನರೇ ವಿಷಮಗೊಳಿಸಿಬಿಡುತ್ತಾರೇನೋ ಎನಿಸುತ್ತಿದೆ.
ಉತ್ತರದ ಕೆಲವು ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣದಲ್ಲಿ; ಮುಖ್ಯವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ಕೈಮೀರದೇ ನಿಯಂತ್ರಣದಲ್ಲಿದೆ. ಇನ್ನೊಂದೆಡೆ ದಿಲ್ಲಿ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಉತ್ತರಪ್ರದೇಶ ಹಾಗೂ ತಮಿಳುನಾಡಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಸಾಗುತ್ತಿದೆ.
ಈ ರಾಜ್ಯಗಳಲ್ಲಿನ ಆಡಳಿತ ಪಕ್ಷಗಳೂ ಪರಿಸ್ಥಿತಿ ನಿಭಾಯಿಸಲು ಶತಪ್ರಯತ್ನ ನಡೆಸಿರುವುದು ದಿಟವಾದರೂ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಮಹಾರಾಷ್ಟ್ರದ ಪರಿಸ್ಥಿತಿಯಂತೂ ಕಳವಳಗೊಳಿಸುವಂತಿದೆ.
ಮಂಗಳವಾರದ ಹೊತ್ತಿಗೆ ಅಲ್ಲಿ ಸೋಂಕಿತರ ಸಂಖ್ಯೆ 14 ಸಾವಿರ ದಾಟಿದ್ದರೆ, ಮೃತಪಟ್ಟವರ ಸಂಖ್ಯೆ 580ಕ್ಕೂ ಅಧಿಕವಾಗಿದೆ. ಒಂದೇ ದಿನದಲ್ಲೇ 771 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ದೇಶದಲ್ಲಿ ಕೋವಿಡ್ ಸೋಂಕಿತ ಪ್ರದೇಶಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ, ಅದಕ್ಕೆ ತಕ್ಕಂತೆ ವಿನಾಯಿತಿ ನೀಡಲಾಗಿದೆಯಾದರೂ, ಸೋಮವಾರ ಮತ್ತು ಮಂಗಳವಾರವೊಂದೇ ದಿನ ಜನ ತೋರಿಸಿದ ಅಸಡ್ಡೆಯು ಗಾಬರಿಗೊಳಿಸುವಂತಿದೆ.
ಅದರಲ್ಲೂ ಮದ್ಯ ಖರೀದಿಗಾಗಿ ದೇಶಾದ್ಯಂತ ಜನರು ಮುಗಿಬಿದ್ದ ರೀತಿಯಂತೂ ಚಿಂತೆಯ ಗೆರೆ ಹುಟ್ಟುಹಾಕಿದೆ. ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಪಾಲಿಸುವ ನಿಯಮಗಳನ್ನೆಲ್ಲ ಜನ ಕಡೆಗಣಿಸಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಪಾಯ ಎಷ್ಟೋ ಪಟ್ಟು ಹೆಚ್ಚಾಗಲಿದೆ. ಜನರು ಹೀಗೆ ಬೇಜವಾಬ್ದಾರಿ ಮೆರೆಯುತ್ತಾ ಹೋದರೆ, ಆಡಳಿತಗಳು ಮತ್ತಷ್ಟು ಅಸಹಾಯಕವಾಗುತ್ತವಷ್ಟೆ. ಅಲ್ಲದೇ, ಇಲ್ಲಿಯವರೆಗಿನ ಪ್ರಯತ್ನವೆಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ.