Advertisement

ಒತ್ತಡಗಳ ನಡುವೆ…ಮಾನಸಿಕ ಆರೋಗ್ಯ ಬಹಳ ಮುಖ್ಯ

01:59 AM Sep 21, 2020 | Hari Prasad |

ಜಗತ್ತಿನಾದ್ಯಂತ ಕೋವಿಡ್‌ನಿಂದಾಗಿ ಜನರ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿರುವುದು ಹಾಗೂ ಇದರ ದೀರ್ಘಾವಧಿ ಪರಿಣಾಮಗಳೇನಾಗಬಹುದು ಎಂದು ಅಧ್ಯಯನಗಳು ನಡೆದಿರುವುದನ್ನು ಓದುತ್ತಲೇ ಇದ್ದೇವೆ.

Advertisement

ಆದರೆ, ಇದೇ ವೇಳೆಯಲ್ಲೇ ಜನರ ಮಾನಸಿಕ ಆರೋಗ್ಯದ ಮೇಲೆ ಈ ಸಂಕಷ್ಟವು ಉಂಟು ಮಾಡುತ್ತಿರುವ ಪರಿಣಾಮದ ಬಗ್ಗೆ ಅಧ್ಯಯನ ವರದಿಗಳು ಬರಲಾರಂಭಿಸಿದರೂ ಈ ಬಗ್ಗೆ ಅಗತ್ಯ ಪ್ರಮಾಣದಲ್ಲಿ ಚರ್ಚೆಗಳು, ಪರಿಹಾರೋಪಾಯಗಳು ಕಾಣುತ್ತಿಲ್ಲ ಇಲ್ಲ ಎಂದು ಇಂಡಿಯನ್‌ ಸೈಕಿಯಾಟ್ರಿಕ್‌ ಸೊಸೈಟಿಯ(ಐಪಿಎಸ್‌) ಅಧ್ಯಯನ ತಂಡ ಹೇಳುತ್ತಿರುವುದನ್ನು ಗಮನವಿಟ್ಟು ಕೇಳಿಸಿ ಕೊಳ್ಳಲೇಬೇಕಿದೆ.

ಈ ಸಂಸ್ಥೆಯೆಂದಷ್ಟೇ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆಯೂ (WHO) ಕೋವಿಡ್ 19 ವೈರಸ್‌ ಸಾಂಕ್ರಾಮಿಕವನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯೆಂದು ಘೋಷಿಸುವಾಗ, ‘ಮಾನಸಿಕ ಆರೋಗ್ಯದ ಬಗ್ಗೆಯೂ ಜನರು ಕಾಳಜಿಮಾಡಿಕೊಳ್ಳಬೇಕು’ ಎಂದು ಎಚ್ಚರಿಸಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೋವಿಡ್‌ ಸಂಕಷ್ಟದಿಂದಾಗಿ ಅನೇಕ ದೇಶಗಳಲ್ಲಿ ಜಾರಿ ಮಾಡಲಾದ ಲೌಕ್‌ಡೌನ್‌, ಐಸೋಲೇಷನ್‌, ಸಾಮಾಜಿಕ ಅಂತರ ಪಾಲನೆ, ನಿರುದ್ಯೋಗ, ಭವಿಷ್ಯದ ಬಗ್ಗೆ ಅತಂತ್ರತೆಯಂಥ ಸಂಗತಿಗಳು ಜನರ ಮಾನಸಿಕ ಆರೋಗ್ಯದ ಮೇಲೆ ಅಪಾರ ಒತ್ತಡ ಉಂಟುಮಾಡುತ್ತಿವೆ.

ಈ ನಿಟ್ಟಿನಲ್ಲಿ ಬರುತ್ತಿರುವ ಅಧ್ಯಯನ ವರದಿಗಳು ಹಾಗೂ ಸುದ್ದಿಗಳು ಈ ಎಚ್ಚರಿಕೆಯನ್ನೇ ಪುನರುಚ್ಚರಿಸುವಂತಿವೆ. ಕಳೆದ ಆರು ತಿಂಗಳಲ್ಲಿ ಜಗತ್ತಿನಾದ್ಯಂತ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕೋರಿ ಮನಶ್ಯಾಸ್ತ್ರಜ್ಞರ ಬಳಿ ತೆರಳುವವರ ಸಂಖ್ಯೆ ದ್ವಿಗುಣಗೊಂಡಿದೆ.

Advertisement

ಈ ವೇಳೆಯಲ್ಲೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಅಧಿಕವಾಗಿದೆಯಂತೆ. ಇವುಗಳಷ್ಟೇ ಅಲ್ಲದೆ, ಒತ್ತಡ-ದುಗುಡವನ್ನು ಎದುರಿಸುತ್ತಾ ಖನ್ನತೆಗೆ ಜಾರುವ ಅಪಾಯದಲ್ಲಿರುವವರ ಸಂಖ್ಯೆಯೂ ವೃದ್ಧಿಸಿದೆ. ನಮ್ಮಲ್ಲಿನ ವಿಷಯಕ್ಕೇ ಬಂದರೆ, ನಿಮ್ಹಾನ್ಸ್‌ನ ಮಾನಸಿಕ

ಸಹಾಯವಾಣಿ ವಿಭಾಗಕ್ಕೆ ಕಳೆದ ಆರು ತಿಂಗಳಿಂದ ಎಡೆಬಿಡದೆ ಕರೆಗಳು ಬರುತ್ತಲೇ ಇವೆಯಂತೆ. ಈ ಪರಿಸ್ಥಿತಿ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಇಂಡಿಯನ್‌ ಸೈಕಿಯಾಟ್ರಿ ಸೊಸೈಟಿಯ ಇತ್ತೀಚಿನ ಅಧ್ಯಯನ ವರದಿಯು, ಕೋವಿಡ್‌ನ‌ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳಿಂದಾಗಿ ದೇಶದಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುವವರ ಸಂಖ್ಯೆಯಲ್ಲಿ 15ರಿಂದ 20 ಪ್ರತಿಶತ ಏರಿಕೆ ಕಂಡುಬಂದಿದೆ

ಎನ್ನುತ್ತದೆ. ಮುಖ್ಯವಾಗಿ, ಕೋವಿಡ್‌ ಸೋಂಕಿಗೆ ತುತ್ತಾಗುವ ಭಯ, ಸಾಮಾಜಿಕ ಅಂತರ ಪಾಲನೆ ಹಾಗೂ ಲಾಕ್‌ಡೌನ್‌ ಸಮಯದಲ್ಲಿ ಹುಟ್ಟಿಕೊಂಡ ಏಕಾಂಗಿಭಾವ ಹಾಗೂ ಮೂರನೆಯದಾಗಿ ನೌಕರಿ ಅಥವಾ ವ್ಯವಹಾರದ ವಿಷಯದಲ್ಲಿನ ಅನಿಶ್ಚಿತತೆಯು ಖನ್ನತೆ, ಒತ್ತಡದ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಂತೆ. ಈಗಲಾದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ದೈಹಿಕ ಆರೋಗ್ಯಕ್ಕೆ ಕೊಟ್ಟಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ಕೊಡಬೇಕಾದ ಅಗತ್ಯವಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಚಿಂತಿಸುವಂತಾಗಲಿ. ಇನ್ನು ಸಮಾಜವೂ ಸಹ ಮಾನಸಿಕ ಸಮಸ್ಯೆಯೆಂದರೆ ‘ಹುಚ್ಚು’ ಎಂಬ ತಪ್ಪುಕಲ್ಪನೆಯಿಂದ ಹೊರಬಂದು, ಅಗತ್ಯವೆದುರಾದರೆ ತಜ್ಞರ ನೆರವು ಪಡೆಯುವುದಕ್ಕೆ ಹಿಂಜರಿಯದಂಥ ವಾತಾವರಣ ನಿರ್ಮಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next