ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕುವ ಜತೆಯಲ್ಲಿ ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯೊಂದನ್ನು ಕೇಂದ್ರ ಸರಕಾರ ಘೋಷಿಸಿದೆ.
ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಏಳು ದಿನಗಳ ವರೆಗೆ ಗರಿಷ್ಠ 1.5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆಯನ್ನು ನೀಡುವ ಮಹತ್ತರ ಯೋಜನೆ ಇದಾ ಗಿದ್ದು, ಇದೇ ಮಾರ್ಚ್‌ನಲ್ಲಿ ದೇಶಾದ್ಯಂತ ಜಾರಿಗೆ ಬರಲಿದೆ. ಈ ಯೋಜನೆ ಪರಿ ಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ಲಕ್ಷಾಂತರ ಜನರಿಗೆ ಜೀವದಾನ ಲಭಿ ಸಲಿದೆಯಲ್ಲದೆ ದೇಶದ ಮುಂಚೂಣಿಯ ಆರೋಗ್ಯ ಸೇವಾ ಯೋಜನೆ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಇನ್ನು ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ “ಗೇಮ್ ಚೇಂಜರ್’ ಯೋಜನೆ ಇದಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಸಚಿವರ ಸಭೆಯ ಬಳಿಕ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದ್ದಾರೆ. ವರ್ಷದ ಹಿಂದೆಯೇ ಕೇಂದ್ರ ಸರಕಾರ ಪ್ರಾಯೋಗಿಕ ನೆಲೆಯಲ್ಲಿ ಚಂಡೀಗಢದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಇದಾದ ಬಳಿಕ ಹಂತಹಂತವಾಗಿ ಆರು ರಾಜ್ಯಗಳಿಗೆ ಯೋಜನೆಯನ್ನು ವಿಸ್ತರಿಸಲಾಗಿತ್ತು. ಯೋಜನೆಯಲ್ಲಿನ ಕೆಲವು ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಿ, ದೇಶಾದ್ಯಂತ ಈ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಿದೆ.
ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಹಲವು ಬಾರಿ ಗಾಯಾಳು ಗಳಿಗೆ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಅವರು ಸಾವಿಗೀಡಾಗುತ್ತಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡವರಿಗೆ “ಗೋಲ್ಡನ್ ಅವರ್’ನಲ್ಲಿ ತುರ್ತು ಚಿಕಿತ್ಸೆ ಲಭಿಸಿದ್ದೇ ಆದರೆ ಅವರ ಪ್ರಾಣ ರಕ್ಷಣೆ ಸಾಧ್ಯ. ಇದನ್ನು ಮನಗಂಡ ಸರಕಾರ ಈ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಪೊಲೀಸ್, ಆಸ್ಪತ್ರೆ ಮತ್ತು ರಾಜ್ಯದ ಆರೋಗ್ಯ ಏಜೆನ್ಸಿಗಳ ಜತೆಗೂಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ.
ಈ ಯೋಜನೆಯಡಿ ದೇಶಾದ್ಯಂತದ ಎಲ್ಲ ಮಾದರಿಯ ರಸ್ತೆಗಳಲ್ಲಿ ವಾಹನಗಳಿಂದಾಗುವ ಅಪಘಾತ ಗಳ ಗಾಯಾಳುಗಳಿಗೆ ಈ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಲಭಿಸಲಿದೆ. ಈ ಯೋಜನೆಯ ಸುವ್ಯವಸ್ಥಿತ ಅನುಷ್ಠಾನಕ್ಕಾಗಿ ಹೊಸ ಐಟಿ ಪ್ಲಾಟ್‌ಫಾರ್ಮ್ ಅನ್ನು ತೆರೆಯಲಾಗುವುದು. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಈ ನಗದು ರಹಿತ ಚಿಕಿತ್ಸೆಯ ಸೌಲಭ್ಯವನ್ನು ಒದಗಿಸಲು ಸರಕಾರ ನಿರ್ಧರಿಸಿದೆ.
ಇನ್ನು ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಕುಟುಂಬದ ಸದಸ್ಯರಿಗೆ 2 ಲ.ರೂ. ಪರಿಹಾರ ನೀಡುವುದಾಗಿಯೂ ಸಚಿವ ಗಡ್ಕರಿ ಘೋಷಿಸಿದ್ದಾರೆ. ಯೋಜನೆಯನ್ನು ಯಾವುದೇ ಗೊಂದಲಗಳಿಲ್ಲದಂತೆ ಜಾರಿಗೆ ತರುವ ಹೊಣೆಗಾರಿಕೆ ಸರಕಾರದ ಮೇಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳ ನಡುವೆ ತ್ವರಿತ ಸಮನ್ವಯ ಅತ್ಯಂತ ಮಹತ್ವ ದ್ದಾಗಿದೆ.
ಇದೇ ವೇಳೆ ಸರಕಾರದ ಯೋಜನೆ ಎಂದು ವಿವಿಧ ಪರೀಕ್ಷೆ, ಚಿಕಿತ್ಸೆಯ ನೆಪ ದಲ್ಲಿ ಆಸ್ಪತ್ರೆಗಳು ಗಾಯಾಳುಗಳನ್ನು ಸತಾಯಿಸದಂತೆ ನಿಗಾ ಇರಿಸಬೇಕು. ಈಗಾಗಲೇ ಸರಕಾರದ ವಿವಿಧ ಆರೋಗ್ಯ ಸೇವಾ ಯೋಜನೆಗಳ ಫಲಾನು ಭವಿಗಳು ಇಂತ ಹುದೇ ಸಂಕಷ್ಟವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಬಗ್ಗೆ ಎಲ್ಲ ಆಸ್ಪತ್ರೆಗಳಿಗೆ ಯೋಜನೆಯ ಅನುಷ್ಠಾನದ ಕುರಿತಂತೆ ಸ್ಪಷ್ಟ ಮಾರ್ಗ ಸೂಚಿಯೊಂದನ್ನು ರೂಪಿಸಿ, ಜಾರಿಗೆ ತರಬೇಕು ಹಾಗೂ ಇದನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೀಗಾದಲ್ಲಿ ಮಾತ್ರವೇ ಕೇಂದ್ರ ಸರಕಾರದ ಉದ್ದೇಶ ಈಡೇರಲು ಸಾಧ್ಯ.