Advertisement

ನಿಲ್ಲದ ಪಾಕ್‌ ಕುತಂತ್ರ ಕಟ್ಟೆಚ್ಚರ ಅಗತ್ಯ

02:17 AM Apr 29, 2020 | Hari Prasad |

ಒಂದೆಡೆ ಇಡೀ ಪ್ರಪಂಚ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ವ್ಯಸ್ತವಾಗಿದ್ದರೆ, ಇನ್ನೊಂದೆಡೆ ನೆರೆರಾಷ್ಟ್ರ ಪಾಕಿಸ್ತಾನ ತನ್ನ ಭಯೋತ್ಪಾದನೆಯ ಅಜೆಂಡಾಕ್ಕೆ ವೇಗ ಕೊಡುವಲ್ಲಿ ಮಗ್ನವಾಗಿದೆ.

Advertisement

ಪಾಕಿಸ್ತಾನವು, ಜಮ್ಮು-ಕಾಶ್ಮೀರದೊಳಗೆ ಹಿಜ್ಬುಲ್‌ ಮುಜಾಹಿದ್ದೀನ್‌ ಹಾಗೂ ಲಷ್ಕರ್‌ನ 300ಕ್ಕೂ ಅಧಿಕ ಉಗ್ರರನ್ನು ಮತ್ತು ಕೋವಿಡ್ ಸೋಂಕಿತರನ್ನು ನುಸುಳಿಸಲು ಸಂಚು ರೂಪಿಸಿಕೊಂಡಿದೆ ಎನ್ನುವ ಸಂಗತಿಯು, ಆ ದೇಶಕ್ಕೆ ಎಂಥ ಸಂಕಟ ಎದುರಾದರೂ ಕೂಡ ಅದು ತನ್ನ ಭಾರತ ವಿರೋಧಿ ಕೃತ್ಯಗಳನ್ನು ಮಾತ್ರ ನಿಲ್ಲಿಸುವುದಿಲ್ಲ ಎನ್ನುವುದನ್ನು ಸಾಬೀತು ಮಾಡುತ್ತಿದೆ.

ಇದೊಂದೇ ವರ್ಷದಲ್ಲೇ ಗಡಿಯೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಒಟ್ಟು 54 ಉಗ್ರರನ್ನು ನಮ್ಮ ಸೇನೆ ಹೊಡೆದುರುಳಿಸಿದೆ. ಈ ಹೋರಾಟದಲ್ಲಿ ನಮ್ಮ ಯೋಧರೂ ವೀರ ಮರಣವಪ್ಪಿದ್ದಾರೆ.

ಪ್ರತಿ ವರ್ಷ ಏಪ್ರಿಲ್‌ – ಮೇ ತಿಂಗಳಲ್ಲಿ ಪಾಕಿಸ್ತಾನದ ದುಷ್ಕೃತ್ಯಗಳು ಅತಿಯಾಗಿಬಿಡುತ್ತವೆ. ಏಕೆಂದರೆ, ಈ ಸಮಯದಲ್ಲಿ ಕಾಶ್ಮೀರದದಲ್ಲಿ ಹಿಮ ಕರಗಲಾರಂಭಿಸುತ್ತದೆ. ಈ ಸಮಯದಲ್ಲಿ ಪಾಕ್‌ ಸೇನೆಯು ಉಗ್ರರನ್ನು ಭಾರತದೊಳಗೆ ನುಸುಳಿಸಲು ಪ್ರಯತ್ನಿಸಲಾರಂಭಿಸುತ್ತದೆ.

ಭಾರತ ದ್ವೇಷದ ಮೇಲೆಯೇ ಅಸ್ತಿತ್ವಕ್ಕೆ ಬಂದ ಪಾಕಿಸ್ತಾನದ ಏಕೈಕ ಉದ್ದೇಶ ಜಮ್ಮು-ಕಾಶ್ಮೀರ ಸೇರಿದಂತೆ ಇಡೀ ಭಾರತದಲ್ಲಿ ಅಶಾಂತಿ-ಅಸ್ಥಿರತೆ ಹರಡುವುದಾಗಿದೆ. ಈ ಕುಕೃತ್ಯದಲ್ಲಿ ಪಾಕಿಸ್ತಾನದ ಸಂಪೂರ್ಣ ಆಡಳಿತ ವ್ಯವಸ್ಥೆ, ಐಎಸ್‌ಐ ಹಾಗೂ ಸೇನೆ ಭಾಗಿಯಾಗಿರುತ್ತವೆ.

Advertisement

ಐಎಸ್‌ಐ ಭಾರತದಲ್ಲಿ ಆತಂಕ ಹರಡಲು ತಂತ್ರಗಳನ್ನು ಹೆಣೆಯುತ್ತದೆ, ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಪಾಕ್‌ ಸರ್ಕಾರ ಒದಗಿಸುತ್ತದೆ, ಈ ಕಾರ್ಯಾಚರಣೆಗೆ ಪಾಕ್‌ ಸೇನೆ ಸಹಕರಿಸುತ್ತದೆ.

ಈಗ ಭಾರತದೊಳಗೆ ನುಸುಳಲು ತಯ್ಯಾರಿ ನಡೆಸಿರುವ 300ಕ್ಕೂ ಅಧಿಕ ಉಗ್ರರನ್ನು ಪಾಕಿಸ್ತಾನವು, ನಿಯಂತ್ರಣ ರೇಖೆಯ ಬಳಿಯ 17 ನೆಲೆಗಳಲ್ಲಿ ಇಟ್ಟಿದೆಯಂತೆ. ಇವುಗಳಲ್ಲಿ ಕೆಲವು ನೆಲೆಗಳು ನೌಶೇರಾ ಹಾಗೂ ಛಂಬ್‌ನ ದುರ್ಗಮ ಪರ್ವತಗಳಲ್ಲೂ ಇರುವ ಸೂಚನೆ ನಮ್ಮ ಸೇನೆಗೆ ದೊರೆತಿದೆ.

ಈ ಮಾರ್ಗದ ಮೂಲಕವೇ ದಶಕಗಳಿಂದ ಉಗ್ರರು ಗುಲ್‌ ಮಾರ್ಗ್‌ ಪ್ರವೇಶಿಸುತ್ತಿದ್ದರು. ಇದಷ್ಟೇ ಅಲ್ಲದೆ ಲೀಪಾ ಕಣಿವೆಯ ಆ ಬದಿಯೂ ಉಗ್ರರು ಇರುವ ಬಗ್ಗೆ ಸುಳಿವು ಸಿಕ್ಕಿದೆ.

ಕಳೆದವಾರವಷ್ಟೇ ಪಾಕಿಸ್ತಾನ ಮುಂಬೈ ದಾಳಿಯ ಸಂಚುಕೋರ ಜಕಿ ಉರ್‌ ರೆಹ್ಮಾನ್‌ ಲಕ್ವಿ ಸೇರಿದಂತೆ ಉಗ್ರರ ಪಟ್ಟಿಯಿಂದ ಸಾವಿರಾರು ಜನರ ಹೆಸರನ್ನು ಕೈಬಿಟ್ಟಿರುವುದು ವರದಿಯಾಗಿದೆ.

ಅಂದರೆ, ಯಾರನ್ನು ಜಗತ್ತು ಉಗ್ರರೆಂದು ಕರೆಯುತ್ತದೋ, ಪಾಕಿಸ್ತಾನಕ್ಕೆ ಅವರು ಉಗ್ರರೇ ಅಲ್ಲ. ಒಂದೆಡೆ ಎಫ್ಎಟಿಎಫ್ ನಂಥ ಕಣ್ಗಾವಲು ಪಡೆಯ ಕಪ್ಪುಪಟ್ಟಿಯಿಂದ ತಪ್ಪಿಸಿಕೊಳ್ಳಲು ಒಳ್ಳೆತನದ ನಾಟಕವಾಡುತ್ತಾ, ಇನ್ನೊಂದೆಡೆ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ತನ್ನ ದುಬುìದ್ಧಿಯನ್ನು ತೋರಿಸುತ್ತಲೇ ಇದೆ ಪಾಕಿಸ್ತಾನ.

ಸತ್ಯವೇನೆಂದರೆ, ಬಾಲಾಕೋಟ್‌ ದಾಳಿಯ ನಂತರ ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ನಿಜ ಸಾಮರ್ಥ್ಯದ ಪರಿಚಯವಾಗಿದೆ. ಇದು ಅರಿವಿದ್ದರೂ, ಅದು ಭಾರತಕ್ಕೇನಾದರೂ ಮತ್ತೆ ತೊಂದರೆ ನೀಡಿತೆಂದರೆ, ಅದಕ್ಕೆ ಮತ್ತೆಂದೂ ಚೇತರಿಸಿಕೊಳ್ಳಲಾಗದಂಥ ಪೆಟ್ಟು ಕೊಡಬೇಕು ಭಾರತ.

Advertisement

Udayavani is now on Telegram. Click here to join our channel and stay updated with the latest news.

Next