ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಖಾದ್ಯ ತೈಲಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಭಾರತ ಗರಿಷ್ಠ ಪ್ರಮಾಣದಲ್ಲಿ ವಿದೇಶಗಳಿಂದ ಖಾದ್ಯ ತೈಲಗಳನ್ನು ಅದರಲ್ಲೂ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಸದ್ಯ ತಾಳೆ ಎಣ್ಣೆ ಆಮದಿನಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದ್ದು ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ಗರಿಷ್ಠ ಪ್ರಮಾಣದಲ್ಲಿ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇದೀಗ ಖಾದ್ಯ ತೈಲಗಳು-ತಾಳೆ ಎಣ್ಣೆಗಾಗಿನ ರಾಷ್ಟ್ರೀಯ ಯೋಜನೆಯೊಂದನ್ನು ಘೋಷಿಸಿದೆ. ಇದರಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ತಾಳೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಗುರಿ ಹಾಕಿಕೊಳ್ಳಲಾಗಿದೆ. ಈ ಮೂಲಕ ತಾಳೆ ಎಣ್ಣೆ ಸಹಿತ ಖಾದ್ಯ ತೈಲಗಳ ಆಮದನ್ನು ಕಡಿಮೆಗೊಳಿಸುವ ಉದ್ದೇಶ ಸರಕಾರದ್ದಾಗಿದೆ. ಈ ಯೋಜನೆಗಾಗಿ ಸರಕಾರ ಒಟ್ಟು 11,040 ಕೋ. ರೂ.ಗಳನ್ನು ಮೀಸಲಿರಿಸಿದೆ.
ದೇಶದ 75ನೇ ಸ್ವಾತಂತ್ರೊéàತ್ಸವ ದಿನದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದ್ದರಲ್ಲದೆ ಖಾದ್ಯ ತೈಲ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ಈ ಯೋಜನೆ ನೆರವಾಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದರು. ಅದರಂತೆ ಬುಧವಾರ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಒಪ್ಪಿಗೆ ನೀಡಿದೆ.
ದೇಶದ ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಖಾದ್ಯ ತೈಲ ಬೀಜಗಳ ಉತ್ಪಾದನೆ ಅದರಲ್ಲೂ ಮುಖ್ಯವಾಗಿ ತಾಳೆ ಎಣ್ಣೆ ಉತ್ಪಾದನೆಗೆ ಇನ್ನಷ್ಟು ಹೆಚ್ಚಿನ ಉತ್ತೇಜನ ನೀಡುವ ಮೂಲಕ ಈ ಪ್ರದೇಶವನ್ನು ಖಾದ್ಯ ತೈಲದ ಹಬ್ ಆಗಿ ಪರಿವರ್ತಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಹೊಸ ಯೋಜನೆಯಡಿ ತಾಳೆ ಎಣ್ಣೆ ಉತ್ಪಾದನೆಯನ್ನು ಹೆಚ್ಚಿಸಲು ಬೆಳೆಗಾರರಿಗೆ ಅವಶ್ಯವಿರುವ ಅಗತ್ಯ ಹಣಕಾಸಿನ ನೆರವು ಸಹಿತ ಇತರ ಮೂಲ ಸೌಕರ್ಯಗಳನ್ನು ಒದಗಿಸುವ ಜತೆಯಲ್ಲಿ ಬೆಳೆಗೆ ಸೂಕ್ತ ಬೆಲೆಯನ್ನು ಒದಗಿಸಿಕೊಡುವ ಭರವಸೆಯನ್ನೂ ಸರಕಾರ ನೀಡಿದೆ. ಸದ್ಯ ತಾಳೆ ಬೆಳೆಗಾರರಿಗೆ ನೀಡಲಾಗುತ್ತಿರುವ ಹಣಕಾಸು ನೆರವನ್ನು ಸರಿಸುಮಾರು ಒಂದೂವರೆ ಪಟ್ಟು ಹೆಚ್ಚಿಸಿರುವ ಕೇಂದ್ರ ಸರಕಾರ ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರನ್ನು ತಾಳೆ ಬೆಳೆಯತ್ತ ಆಕರ್ಷಿಸಲು ಮುಂದಾಗಿದೆ.
ಕಳೆದ ಹಲವಾರು ದಶಕಗಳಿಂದ ಖಾದ್ಯ ತೈಲಗಳಿಗಾಗಿ ಭಾರತ ವಿದೇಶಗಳನ್ನೇ ಅವಲಂಬಿತವಾಗಿದೆ. ಇದರ ಪರಿಣಾಮವಾಗಿ ಜನರು ಖಾದ್ಯ ತೈಲಕ್ಕಾಗಿ ಹೆಚ್ಚಿನ ಹಣವನ್ನು ವ್ಯಯಿಸುತ್ತಿರುವುದು ಮಾತ್ರವಲ್ಲದೆ ಗುಣಮಟ್ಟದ ತೈಲವೂ ಅವರಿಗೆ ಲಭಿಸುತ್ತಿಲ್ಲ. ಕಲಬೆರಕೆ ಖಾದ್ಯ ತೈಲಗಳ ಬಳಕೆಯ ಪರಿಣಾಮ ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳುಂಟಾಗುತ್ತಿವೆ. ಈ ಎಲ್ಲ ಸಮಸ್ಯೆಗಳ ನಡುವೆಯೇ ಸರಕಾರ ಖಾದ್ಯ ತೈಲ ಆಮದಿನ ಮೇಲಣ ತೆರಿಗೆಯನ್ನು ಪದೇಪದೆ ಕಡಿತಗೊಳಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ಇದರಿಂದಾಗಿ ಸರಕಾರದ ಮೇಲೆ ಆರ್ಥಿಕವಾಗಿ ಭಾರೀ ಪ್ರಮಾಣದ ಹೊರೆ ಬೀಳುತ್ತಿದೆ. ಆತ್ಮ ನಿರ್ಭರ ಭಾರತದ ಸಂಕಲ್ಪ ತೊಟ್ಟಿರುವ ಕೇಂದ್ರ ಸರಕಾರ ಇದರ ಮತ್ತೂಂದು ಹೆಜ್ಜೆಯಾಗಿ ತಾಳೆ ಎಣ್ಣೆ ಆದಿಯಾಗಿ ಖಾದ್ಯ ತೈಲಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಪಣತೊಟ್ಟಿರುವುದು ಆಶಾದಾಯಕ ಮತ್ತು ಸ್ವಾಗತಾರ್ಹ ಹೆಜ್ಜೆ.