Advertisement

ಫೆ.1ಕ್ಕೆ ಎಡತೊರೆ ಅರ್ಕೇಶ್ವರಸ್ವಾಮಿ ಬ್ರಹ್ಮ ರಥೋತ್ಸವ

09:21 PM Jan 28, 2020 | Lakshmi GovindaRaj |

ಕೆ.ಆರ್‌.ನಗರ: ಕಾವೇರಿ ನದಿಯ ಬಲದಂಡೆಯಲ್ಲಿರುವ ಹಳೆಎಡತೊರೆಯಲ್ಲಿ ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಫೆ.1ರಂದು ಶನಿವಾರ ನಡೆಯಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ. ಕೃಷ್ಣರಾಜನಗರದಿಂದ 2 ಕಿ.ಮೀ. ದೂರದಲ್ಲಿ ಹಾಸನ-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಎಡತೊರೆ ಕ್ಷೇತ್ರದಲ್ಲಿ ಕಾವೇರಿ ನದಿ ಎಡಕ್ಕೆ ತಿರುಗಿ ಹರಿಯುತ್ತಾಳೆ. ಇದರಿಂದಲೇ ಕ್ಷೇತ್ರಕ್ಕೆ ಎಡತೊರೆ ಎಂಬ ಹೆಸರು ಬಂದಿದೆ.

Advertisement

ತಾಲೂಕಿನ ಜನತೆಯ ಆರಾಧ್ಯ ದೈವವಾಗಿರುವ ಅರ್ಕೇಶ್ವರಸ್ವಾಮಿ ಸನ್ನಿಧಿ ಭಕ್ತಿ, ಶ್ರದ್ಧೆಯ ತಾಣವೆಂದು ಪ್ರಸಿದ್ಧಿ ಪಡೆದಿದೆ. ಪ್ರವೇಶ ದ್ವಾರ, ರಾಜಗೋಪುರ, ಗರುಡಗಂಭ, ಅದಕ್ಕೆ ಹೊಂದಿಕೊಂಡಂತೆ ನಂದಿಯ ಸಣ್ಣ ವಿಗ್ರಹ, ಹೊರಾಂಗಣ ಪ್ರಾಕಾರದಲ್ಲಿರುವ ಹತ್ತಾರು ಲಿಂಗಗಳು, ಅರ್ಕೇಶ್ವರನಿಗೆ ಶೈವಾಗಮನದ ರೀತ್ಯ ಪೂಜೆ ಸಲ್ಲಿಸುತ್ತಿರುವುದು, ಪ್ರವೇಶ ದ್ವಾರದ ಎಡಭಾಗದಲ್ಲಿ ಸೂರ್ಯ ದೇವರು, ಈಶಾನ್ಯ ಭಾಗದಲ್ಲಿ ಯಾಗಶಾಲೆ, ಅರ್ಕೇಶ್ವರನ ಹಿಂಭಾಗದಲ್ಲಿ ಮೀನಾಕ್ಷಿ, ಚಂಡಿಕೇಶ್ವರ, ಗಿರಿಜಾ ಕಲ್ಯಾಣ ಮಂಟಪಗಳಿಂದ ಈ ದೇವಾಲಯ ತನ್ನದೇ ವೈಶಿಷ್ಟತೆ ಹೊಂದಿದೆ.

ಕ್ಷೇತ್ರದ ಹಿನ್ನೆಲೆ: ಕ್ಷೇತ್ರದಲ್ಲಿ ಪುರಾಣ ಮತ್ತು ಐತಿಹಾಸಿಕ ಹಿನ್ನೆಲೆಯ ಶ್ರೀಅರ್ಕೇಶ್ವರಸ್ವಾಮಿಯ ದೇವಾಲಯವಿದೆ. ಸೂರ್ಯ ದೇವನು ತನ್ನ ಮಗಳು ಯಮುನೆಯನ್ನು ಪಾಪದೃಷ್ಟಿಯಿಂದ ನೋಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿದನು. ನಂತರ ಎಡತೊರೆಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಪುಷ್ಕರಣಿ ನಿರ್ಮಿಸಿದನೆಂಬುದು ಪೌರಾಣಿಕ ಪ್ರತೀತಿ ಇದೆ. ಸೂರ್ಯನು ಇಲ್ಲಿಯೇ ಇದ್ದು, ಕಾವೇರಿ ತೊರೆಯಲ್ಲಿ ಮಿಂದು ಮಡಿಯಾಗಿ ಶಿವನನ್ನು ಕುರಿತು ತಪಸ್ಸನ್ನಾಚರಿಸುತ್ತಿದ್ದ ಕಾರಣ ಇಲ್ಲಿಯ ಶಿವನಿಗೆ ಅರ್ಕೇಶ್ವರನೆಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಮಹಾಶಿವರಾತ್ರಿಯಂದು ಸೂರ್ಯನ ತಪಸ್ಸಿಗೆ ಒಲಿದ ಪರಮೇಶ್ವರನು ಇಲ್ಲಿ ಸ್ವಯಂ ಭೂಲಿಂಗ ರೂಪದಿಂದ ಪ್ರತ್ಯಕ್ಷನಾಗಿ ಅನುಗ್ರಹಿಸಿದನಂತೆ. ಅದರ ಕುರುಹಾಗಿ ಇಂದಿಗೂ ಶಿವರಾತ್ರಿಯ ದಿನ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳು ಈ ಲಿಂಗವನ್ನು ಸ್ಪರ್ಶಿಸಿ ಪೂಜಿಸುವವು ಎಂದು ಹೇಳಲಾಗುತ್ತಿದೆ. 9ನೇ ಶತಮಾನದ ಗಂಗರ ಕಾಲಕ್ಕೆ ಸೇರಿದ ಶಾಸನ ಈ ದೇವಾಲಯದ ಬಳಿ ದೊರೆತಿದೆ. 11ನೇ ಶತಮಾನದಲ್ಲಿ ರಾಜೇಂದ್ರಚೋಳ ವಾಸವಾಗಿದ್ದ ಈ ಪ್ರದೇಶದಲ್ಲಿ ದೇವಾಲಯದ ನಿರ್ಮಾಣಕ್ಕೆ ಅಂಗೈಕಾರನ್‌ ಎಂಬುವವರು ಈಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡಿದನೆಂದು ತಮಿಳು ಶಾಸನದಿಂದ ತಿಳಿದು ಬಂದಿದೆ.

ಗಂಗರ ಕಾಲದಲ್ಲಿ ಅರ್ಕೇಶ್ವರ ದೇವಾಲಯ, ಚೋಳರ ಕಾಲದಲ್ಲಿ ಮೀನಾಕ್ಷಿ ದೇವಾಲಯ ನಿರ್ಮಾಣವಾಯಿತೆಂದು ಇತಿಹಾಸ ಹೇಳಿದರೂ, ಖಚಿತ ಆಧಾರಗಳು ಈ ದೇವಾಲಯ ನಿರ್ಮಾಣದ ನಿರ್ದಿಷ್ಟ ಕಾಲ ತಿಳಿಸಲು ವಿಫ‌ಲವಾಗಿವೆ. ಆದರೆ, ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಈ ದೇವಾಲಯ ಜೀರ್ಣೋದ್ಧಾರವಾಗಿ ಅಭಿವೃದ್ಧಿಗೊಂಡಿತೆಂದು ಮಾತ್ರ ಸ್ಪಷ್ಟವಾಗುತ್ತದೆ. ಅಮೃತಪುರಿ ಅಥವಾ ಭಾಸ್ಕರ ರಾಜ ಕ್ಷೇತ್ರದಲ್ಲಿ ನೆಲೆಸಿ ರಾರಾಜಿಸುತ್ತಿರುವ ಅರ್ಕೇಸ್ವರಸ್ವಾಮಿ ಬೃಹ್ಮ ರಥೋತ್ಸವ ಪ್ರತಿ ವರ್ಷ ರಥಸಪ್ತಮಿಯ ದಿನದಂದು ನಡೆಯುತ್ತದೆ.

Advertisement

* ಗೇರದಡ ನಾಗಣ್ಣ

Advertisement

Udayavani is now on Telegram. Click here to join our channel and stay updated with the latest news.

Next