Advertisement
ಇದೇ “ಈಡನ್ ಗಾರ್ಡನ್ಸ್’ನಲ್ಲಿ ಭಾರತ-ಶ್ರೀಲಂಕಾ ತಂಡಗಳು ಮತ್ತೆ ಮುಖಾಮುಖೀಯಾಗುತ್ತಿವೆ. ಆದರೆ ಇದು ಏಕದಿನ ಪಂದ್ಯವಲ್ಲ, ಟೆಸ್ಟ್ ಮುಖಾಮುಖೀ. ಗುರುವಾರದಿಂದ ಇಲ್ಲಿ ಸರಣಿಯ ಮೊದಲ ಟೆಸ್ಟ್ ಆರಂಭವಾಗಲಿದೆ. ಈಡನ್ ಅಂಗಳ ಸರ್ವವಿಧದಲ್ಲೂ ಸಜ್ಜಾಗಿದೆ. ಅಂದಹಾಗೆ, ಇದು ಭಾರತ-ಶ್ರೀಲಂಕಾ ನಡುವೆ ಕೋಲ್ಕತಾದಲ್ಲಿ ನಡೆ ಯುವ ಮೊದಲ ಟೆಸ್ಟ್ ಪಂದ್ಯ ಎಂಬುದು ವಿಶೇಷ.
ಹೌದು, ಭಾರತದಲ್ಲಿ ಈವರೆಗೆ ಲಂಕಾ 17 ಟೆಸ್ಟ್ ಪಂದ್ಯಗಳನ್ನಾಡಿದರೂ ಈವರೆಗೆ ಒಂದನ್ನೂ ಗೆದ್ದಿಲ್ಲ ! ಈ 17 ಪಂದ್ಯಗಳಲ್ಲಿ ಭಾರತ ಹತ್ತರಲ್ಲಿ ಜಯ ಸಾಧಿಸಿದರೆ, ಉಳಿದ 7 ಪಂದ್ಯಗಳು ಡ್ರಾಗೊಂಡಿವೆ. 1997-98ರ 3 ಪಂದ್ಯ ಗಳ ಸರಣಿಯನ್ನು ಡ್ರಾ ಮಾಡಿಕೊಂಡದ್ದು ಲಂಕೆಯ ಅತ್ಯುತ್ತಮ ಸಾಧನೆ. ಹಾಗೆ ನೋಡಿದರೆ, ಶ್ರೀಲಂಕಾ ತನ್ನ ಟೆಸ್ಟ್ ಚರಿತ್ರೆಯ ಮೊದಲ ಪಂದ್ಯ ವನ್ನೇ ಗೆಲುವಿನೊಂದಿಗೆ ಆರಂಭಿಸಬೇಕಿತ್ತು. 1982ರ ಸೆಪ್ಟಂಬರ್‌ನಲ್ಲಿ ಭಾರತದ ವಿರುದ್ಧ ಚೆನ್ನೈಯಲ್ಲಿ ಪ್ರಪ್ರಥಮ ಟೆಸ್ಟ್ ಆಡಿದ ಶ್ರೀಲಂಕಾ ಗೆಲುವಿನ ಬಾಗಿಲ ತನಕ ಬಂದಿತ್ತು. ಆದರೆ ಭಾರತದ ನಸೀಬು ಗಟ್ಟಿ ಇತ್ತು. ಅದು “ಕ್ರಿಕೆಟ್ ಶಿಶು’ಗಳೆದುರು ದೊಡ್ಡ ಅವಮಾನವೊಂದರಿಂದ ಪಾರಾಯಿತು. ಲಂಕೆಗೆ ಅಲ್ಲಿ ಒಲಿಯಬೇಕಿದ್ದ ಗೆಲುವು ಇಂದಿನ ವರೆಗೂ ಕೈಹಿಡಿದಿಲ್ಲ.
Related Articles
ಶ್ರೀಲಂಕಾ ತಂಡ ಚೊಚ್ಚಲ ಟೆಸ್ಟ್ ಆಡಿದ್ದು ಚೆನ್ನೈನ ” ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ. ಪ್ರವಾಸಿ ತಂಡದ ನಾಯಕರಾಗಿದ್ದವರು ದುಲೀಪ್ ಮೆಂಡಿಸ್. ಮೊದಲು ಬ್ಯಾಟ್ ಮಾಡಿದ ಲಂಕಾ ಮೆಂಡಿಸ್ ಶತಕದ ನೆರವಿನಿಂದ (105) 346 ರನ್ ಪೇರಿಸಿತು. ಸ್ಪಿನ್ನರ್ ದಿಲೀಪ್ ದೋಶಿ 5, ಕಪಿಲ್ 3 ಹಾಗೂ ಮದನ್‌ಲಾಲ್ 2 ವಿಕೆಟ್ ಕಿತ್ತರು.
Advertisement
ಜವಾಬಿತ್ತ ಭಾರತ ಛಾತಿಗೆ ತಕ್ಕ ಪ್ರದರ್ಶನ ನೀಡಿ 6ಕ್ಕೆ 566 ರನ್ ಪೇರಿಸಿ ಡಿಕ್ಲೇರ್ ಮಾಡಿತು. ನಾಯಕ ಗಾವಸ್ಕರ್ 155, ಸಂದೀಪ್ ಪಾಟೀಲ್ 114 ರನ್ ಬಾರಿಸಿದರು. ದ್ವಿತೀಯ ಸರದಿಯಲ್ಲಿ ಮೆಂಡಿಸ್ ಮತ್ತೆ 105 ರನ್ ಹೊಡೆದರು; ರಾಯ್ ಡಾಯಸ್ ಬ್ಯಾಟಿನಿಂದ 97 ರನ್ ಸಿಡಿಯಿತು. ಲಂಕಾ 394 ರನ್ ಮಾಡಿತು. ಕಪಿಲ್ 5, ದೋಷಿ 3, ರಾಕೇಶ್ ಶುಕ್ಲಾ 2 ವಿಕೆಟ್ ಕಿತ್ತರು.
175 ರನ್ನುಗಳ ಸಾಮಾನ್ಯ ಮೊತ್ತದ ಗೆಲುವಿನ ಗುರಿ ಪಡೆದ ಭಾರತಕ್ಕೆ ದೊಡ್ಡ ಗಂಡಾಂತರವೊಂದು ಕಾದಿತ್ತು. ಗೆಲುವಿರಲಿ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೇ ಹರಸಾಹಸವಾಗಿ ಪರಿಣಮಿಸಿತ್ತು. ಅಸಂತ ಡಿ ಮೆಲ್ (68ಕ್ಕೆ 5) ದಾಳಿಗೆ ಸಿಲುಕಿದ ಭಾರತ ಕುಸಿಯುತ್ತಲೇ ಹೋಯಿತು. ಸೋಲಿನ ಭೀತಿಯೂ ಎದುರಾಯಿತು. ಆದರೆ ಯಶ್ಪಾಲ್ ಶರ್ಮ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ತಂಡಕ್ಕೆ ರಕ್ಷಣೆ ಒದಗಿಸಿದರು. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವಾಗ ಭಾರತದ ಸ್ಕೋರ್ 7ಕ್ಕೆ 135 ರನ್!
ಎಚ್. ಪ್ರೇಮಾನಂದ ಕಾಮತ್