Advertisement

ಆರು ತಿಂಗಳು ಬೆಂಗಳೂರು ರೈಲು ಇಲ್ಲ?

04:10 AM Aug 29, 2018 | Team Udayavani |

ಕಡಬ: ಸುಬ್ರಹ್ಮಣ್ಯ ರಸ್ತೆ (ನೆಟ್ಟಣ)-ಸಕಲೇಶಪುರ ರೈಲು ನಿಲ್ದಾಣಗಳ ಮಧ್ಯೆ ಎಡಕುಮೇರಿ ಪ್ರದೇಶದಲ್ಲಿ ರೈಲು ಹಳಿ ಮೇಲೆ ಸತತವಾಗಿ ಗುಡ್ಡ ಕುಸಿದು ಬೀಳುತ್ತಿದ್ದು, ಕನಿಷ್ಠ ಆರು ತಿಂಗಳು ರೈಲು ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಕೆಲವು ದಿನಗಳಿಂದ ಈಗಾಗಲೇ ಬೆಂಗಳೂರು – ಮಂಗಳೂರು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನಿರಂತರವಾಗಿ ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದ್ದರೂ ರೈಲು ಮಾರ್ಗ ಸುಸ್ಥಿತಿಗೆ ಬರಲು ಆರು ತಿಂಗಳಾದರೂ ಬೇಕು ಎನ್ನುತ್ತಿದ್ದಾರೆ ಪರಿಣಿತರು.

Advertisement

ಹಳಿಗೆ ಬಿದ್ದ ಮಣ್ಣು
ಮೀಟರ್‌ ಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ಪರಿವರ್ತನೆಗೊಂಡ ಮಾರ್ಗದ ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿದಿರಲಿಲ್ಲ. ಎಡಕುಮೇರಿ, ಕಡಗರ ಹಳ್ಳ, ದೋಣಿಗಲ್‌ ರೈಲು ನಿಲ್ದಾಣದ ಹಾದಿಯಲ್ಲಿ 40ಕ್ಕೂ ಹೆಚ್ಚು ಕಡೆ ಗುಡ್ಡವಷ್ಟೇ ಅಲ್ಲ, ಕೆಲವೆಡೆ ಬಂಡೆ ಕಲ್ಲುಗಳೂ ಬಿದ್ದಿದ್ದು, ಹಳಿಗಳೂ ನಜ್ಜುಗುಜ್ಜಾಗಿವೆ.

ಆಗಾಗ್ಗೆ ಮಳೆ ಬೀಳುತ್ತಿರುವುದೂ ಮಣ್ಣು ತೆಗೆಯುವ ಕಾಮಗಾರಿಯ ವೇಗಕ್ಕೆ ತಡೆಯೊಡ್ಡಿದೆ. ಹಾಗಾಗಿ ಕೇವಲ ಹಳಿ ಮೇಲಿನ ಮಣ್ಣು ತೆರವಿಗೇ ಕಡಿಮೆ ಎಂದರೂ 3-4 ತಿಂಗಳು ತಗಲೀತು ಎಂಬುದು ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಹಿಟಾಚಿ ಯಂತ್ರಗಳನ್ನು ಮಣ್ಣು ಬಿದ್ದಲ್ಲಿಗೆ ಕೊಂಡೊಯ್ಯಲೂ ಹರಸಾಹಸ ಪಡುವಂತಾಗಿದೆ. ಮಣ್ಣು ತೆರವು ಕಾಮಗಾರಿ ನಿರತ ರೈಲ್ವೇ ಇಲಾಖೆಯ ತುರ್ತು ನಿರ್ವಹಣಾ ಘಟಕದ ಕಾರ್ಮಿಕರಿಗೆ ಆಹಾರ ಹಾಗೂ ಯಂತ್ರಗಳಿಗೆ ಇಂಧನ ಪೂರೈಸುವುದೂ ಸಮಸ್ಯೆಯಾಗಿದೆ. ಆದರೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಲು ಇನ್ನಷ್ಟು ಪರಿಣತ ಅಧಿಕಾರಿಗಳು ಹಾಗೂ ಕಾರ್ಮಿಕರ ತಂಡವನ್ನು ನಿಯೋಜಿಸುವುದು ಸೂಕ್ತ ಎಂಬ ಸಲಹೆ ವ್ಯಕ್ತವಾಗಿದೆ.

ಆರು ತಿಂಗಳು ಬೇಕು
ಒಮ್ಮೆ ಮಣ್ಣು ತೆರವುಗೊಂಡರೂ, ಬಳಿಕ ಹಳಿಗಳ ದುರಸ್ತಿಯಾಗಬೇಕಿದೆ. ಅನಂತರ ಉನ್ನತ ಮಟ್ಟದ ತಾಂತ್ರಿಕ ಅಧಿಕಾರಿಗಳು ಹಳಿಯನ್ನು ಪರಿಶೀಲಿಸಿ, ಪ್ರಾಯೋಗಿಕ ಸಂಚಾರ ಕೈಗೊಳ್ಳಬೇಕು. ಇವೆಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಮತ್ತೆ ರೈಲು ಸಂಚಾರ ಆರಂಭವಾಗಬಹುದು. ಇದಕ್ಕೆ ಆರು ತಿಂಗಳಾದರೂ ಬೇಕಾಗಬಹುದು ಎನ್ನುತ್ತಾರೆ ಪರಿಣಿತರು. ಶಿರಾಡಿ ಘಾಟ್‌ ರಸ್ತೆಯಲ್ಲೂ ವಾಹನ ಸಂಚಾರ ಸ್ಥಗಿತಗೊಳಿಸಿರುವುದರಿಂದ ಬೆಂಗಳೂರಿಗೆ ಹೋಗುವವರಿಗೆ ಹಾಗೂ ಮಂಗಳೂರಿಗೆ ಬರುವವರಿಗೆ ಸಮಸ್ಯೆಯಾಗಿತ್ತು. ರೈಲು ಸಂಚಾರವೂ ಆರೇಳು ತಿಂಗಳು ಸ್ಥಗಿತಗೊಂಡರೆ ಸಮಸ್ಯೆ ತೀವ್ರತೆ ಹೆಚ್ಚಾಗಲಿದೆ. 

ಜೀವಭಯದಲ್ಲಿ ಕಾರ್ಮಿಕರು
ಒಂದೆಡೆ ದಾಳಿ ಇಡುವ ಆನೆಗಳ ಹಿಂಡು, ಇನ್ನೊಂದೆಡೆ ಗುಡ್ಡ ಕುಸಿತದ ಭೀತಿ ಮಧ್ಯೆ ಹಿಟಾಚಿ ಆಪರೇಟರ್‌ಗಳು ಹಾಗೂ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಬಾರಿ ಒಂದೆಡೆ ಮಣ್ಣು ತೆರವುಗೊಳಿಸಿ ಇನ್ನೊಂದೆಡೆ ಕೆಲಸಕ್ಕೆ ಹೋದಾಗ ಆ ದಾರಿಯಲ್ಲೇ ಮಣ್ಣು ಕುಸಿದು ಕಾರ್ಮಿಕರು ಹಾಗೂ ಅಧಿಕಾರಿಗಳು ದಿಗ್ಬಂಧನಕ್ಕೊಳಗಾದ ಉದಾಹರಣೆಗಳೂ ನಡೆದಿವೆ.

Advertisement

ಪ್ರತಿಕೂಲ ಹವಾಮಾನದ ಮಧ್ಯೆಯೂ ರೈಲ್ವೇ ಇಲಾಖೆ ಹಳಿಗಳ ಮೇಲಿನ ಮಣ್ಣು ತೆರವಿಗೆ ಅಗತ್ಯ ಕ್ರಮ ಕೈಗೊಂಡಿದೆ. ಇತರೆಡೆ ಯಿಂದಲೂ ಇಂಜಿನಿಯರ್‌ಗಳನ್ನು ಗುಡ್ಡ ಕುಸಿತದ ಜಾಗಗಳಿಗೆ ನಿಯೋಜಿಸಲಾಗಿದೆ. ಮತ್ತೆ ಮತ್ತೆ ಗುಡ್ಡ ಕುಸಿಯುತ್ತಿರುವುದರಿಂದ ನಿರೀಕ್ಷಿತ ವೇಗದಲ್ಲಿ ನಿರ್ವಹಿಸಲಾಗುತ್ತಿಲ್ಲ.
– ಕೆ.ಪಿ. ನಾಯ್ಡು, ಸೀನಿಯರ್‌ ಸೆಕ್ಷನ್‌ ಇಂಜಿನಿಯರ್‌, ರೈಲ್ವೇ

— ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next