Advertisement

ಇಡಿ ಸಮನ್ಸ್‌ ಪ್ರಕರಣ : ಡಿಕೆಶಿ ತಾಯಿಗೆ ಸದ್ಯ ನಿರಾಳ

10:36 AM Dec 19, 2019 | Team Udayavani |

ಬೆಂಗಳೂರು: ಹಣ ದುರ್ಬಳಕೆ ಕಾಯ್ದೆ ಅಡಿಯಲ್ಲಿನ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ತಾಯಿ ಗೌರಮ್ಮ ಅವರ ವಿಚಾರಣೆಯನ್ನು ಕನಕಪುರದ ಅವರ ನಿವಾಸದಲ್ಲಿಯೇ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಅ.9ರಂದು ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ ಪ್ರಶ್ನಿಸಿ ಗೌರಮ್ಮ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ. ನರೇಂದರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗೌರಮ್ಮ ಅವರನ್ನು ಕನಕಪುರದ ಅವರ ನಿವಾಸದಲ್ಲೇ ವಿಚಾರಣೆ ನಡೆಸಬೇಕು ಮತ್ತು ಹೇಳಿಕೆ ಪಡೆದುಕೊಳ್ಳಬೇಕು. ವಿಚಾರಣೆಯನ್ನು ಕನ್ನಡದಲ್ಲೇ ನಡೆಸಬೇಕು.

ವಿಚಾರಣೆಯ ಆಡಿಯೋ ರೆಕಾರ್ಡಿಂಗ್‌ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

ಇದೇ ವೇಳೆ, ವಿಚಾರಣೆ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಅಗತ್ಯ ಭದ್ರತೆ ಒದಗಿಸುವಂತೆ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ ನ್ಯಾಯಪೀಠ, ಅಧಿಕಾರಿಗಳ ವಿಚಾರಣೆಗೆ ಅಡ್ಡಿಪಡಿಸುವಂತಿಲ್ಲ, ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ಎಂದು ಹೇಳಿತು.

Advertisement

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ “”ಗೌರಮ್ಮ ಅವರಿಗೆ 85 ವರ್ಷವಾಗಿದೆ, ಹಲವು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ನೆನಪಿನ ಶಕ್ತಿ ಕಳೆದುಕೊಳ್ಳುತ್ತಾರೆ. ಹಾಗಾಗಿ ಅವರ ನಿವಾಸದಲ್ಲಿಯೇ ಹೇಳಿಕೆ ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಬೇಕು. ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಅರ್ಜಿದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ ಅಥವಾ ಆರೋಪ ಪಟ್ಟಿಯೂ ದಾಖಲಾಗಿಲ್ಲ.

ಬಲವಂತವಾಗಿ ಅವರ ಬಳಿ ಹೇಳಿಕೆ ಪಡೆಯಲು ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ” ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯದ ಪರ ವಕೀಲರು, ಪ್ರಕರಣದಲ್ಲಿ ಗೌರಮ್ಮ ಆರೋಪಿಯಲ್ಲ. ಸಾಕ್ಷಿಯಾಗಿ ಹೇಳಿಕೆ ಪಡೆದುಕೊಳ್ಳಲು ಸಮನ್ಸ್‌ ನೀಡಲಾಗಿದೆ. ಅಷ್ಟಕ್ಕೂ ಸಮನ್ಸ್‌ ನೀಡಿರುವ ಅವಧಿ ಈಗ ಮುಗಿದಿದೆ. ಆದ್ದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ. ಮೂರು ವಾರಗಳ ಕಾಲ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next