ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರನ್ನು ಕಸ್ಟಡಿಯಲ್ಲಿಟ್ಟು ತನಿಖೆ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಾದ್ರಾ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ಗುರುವಾರ ಆಕ್ಷೇಪ ಸಲ್ಲಿಸಿದೆ.
ಲಂಡನ್ ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ನಿವೇಶನ ಖರೀದಿ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಜಾರಿ ನಿರ್ದೇಶನಾಲಯ ಪರ ವಕೀಲರು ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದು, ವಾದ್ರಾಗೆ ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಬೇಕಾಗಿದೆ ಎಂದು ಮನವಿ ಮಾಡಿರುವುದಾಗಿ ವರದಿ ವಿವರಿಸಿದೆ.
ರಾಬರ್ಟ್ ವಾದ್ರಾ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕೆಂಬ ಜಾರಿ ನಿರ್ದೇಶನಾಲಯದ ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್ ನಡೆಸುತ್ತಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಕಸ್ಟಡಿಗೆ ಪಡೆಯಬೇಕಾಗಿದೆ ಎಂದು ಜಾರಿ ನಿರ್ದೇಶನಾಲಯ ವಾದ ಮಂಡಿಸಿದೆ. ಆದರೆ ಇ.ಡಿ ಆರೋಪವನ್ನು ವಾದ್ರಾ ಪರ ವಕೀಲರು ತಳ್ಳಿಹಾಕಿದ್ದು, ತನ್ನ ಕಕ್ಷಿದಾರ ತನಿಖೆಗೆ ಸಹಕರಿಸಿದ್ದಾರೆ. ಆ ನಿಟ್ಟಿನಲ್ಲಿ ಇ.ಡಿ ಸಮನ್ಸ್ ನೀಡಿದ ಮೇಲೆ ತನಿಖೆಗೆ ಹಾಜರಾಗಿರುವುದಾಗಿ ವಾದಿಸಿದರು.
ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಎಲ್ಲಾ ಪ್ರಶ್ನೆಗಳಿಗೂ ವಾದ್ರಾ ಉತ್ತರ ನೀಡಿದ್ದಾರೆ. ಆದರೆ ತಪ್ಪೊಪ್ಪಿಕೊಂಡಿಲ್ಲ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂದು ಆರೋಪಿಸುವುದು ಸರಿಯಲ್ಲ ಎಂದು ವಕೀಲರು ವಾದ ಮಂಡಿಸಿದ್ದು, ವಾದ-ಪ್ರತಿವಾದ ಆಲಿಸಿದ ಹೈಕೋರ್ಟ ವಾದ್ರಾ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದೆ.