Advertisement

ಕಲ್ಲಿದ್ದಲು ಲೆವಿ ಅವ್ಯವಹಾರ ಆರೋಪ; ಕಾಂಗ್ರೆಸ್‌ ಮುಖಂಡರಿಗೆ ಇ.ಡಿ. ಬಿಸಿ

07:52 PM Feb 20, 2023 | Team Udayavani |

ನವದೆಹಲಿ/ರಾಯ್ಪುರ: ಛತ್ತೀಸ್‌ಗಢದಲ್ಲಿನ ಕಲ್ಲಿದ್ದಲು ಸುಂಕದಲ್ಲಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಕಾಂಗ್ರೆಸ್‌ನ ಪ್ರಮುಖ ನಾಯಕರಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

Advertisement

ಫೆ.24ರಿಂದ 26ರ ವರೆಗೆ ನಯಾ ರಾಯ್ಪುರದಲ್ಲಿ ನಡೆಯಲಿರುವ ಕಾಂಗ್ರೆಸ್‌ ಮಹಾಧಿವೇಶನಕ್ಕೆ ಮುನ್ನವೇ ಈ ಬೆಳವಣಿಗೆ ನಡೆದಿದೆ.

ಕಾಂಗ್ರೆಸ್‌ ಶಾಸಕ ದೇವೇಂದ್ರ ಯಾದವ್‌, ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್‌ ಸಮಿತಿಯ ಖಜಾಂಚಿ ರಾಮಗೋಪಾಲ ಅಗರ್ವಾಲ್‌, ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಸುಶೀಲ್‌ ಸುನ್ನಿ ಅಗರ್ವಾಲ್‌, ಪಕ್ಷದ ವಕ್ತಾರ ಆರ್‌.ಪಿ.ಸಿಂಗ್‌ ಸೇರಿದಂತೆ ಪ್ರಮುಖ ನಾಯಕರಿಗೆ ಸೇರಿದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

ಶೋಧ ಕಾರ್ಯದ ಬಗ್ಗೆ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಇದೊಂದು ತೃತೀಯ ದರ್ಜೆ’ಯ ರಾಜಕಾರಣ ಎಂದು ವಕ್ತಾರ ಪವನ್‌ ಖೇರಾ ಟೀಕಿಸಿದ್ದಾರೆ.ಜಾರಿ ನಿರ್ದೇಶನಾಲಯ (ಇನ್‌ಫೋರ್ಸ್‌ಮೆಂಟ್‌ ಡೈರೆಕ್ಟೊರೇಟ್‌), ಪ್ರಜಾಪ್ರಭುತ್ವ ನಿರ್ನಾಮ (ಎಕ್ಸ್‌ಟರ್ಮಿನೇಟಿಂಗ್‌ ಡೆಮಾಕ್ರಾಸಿ) ಎಂಬುದಾಗಿ ಪರಿವರ್ತನೆಯಾಗಿದೆ ಎಂದು ದೂರಿದ್ದಾರೆ. ಇದು ಅಮೃತ ಕಾಲ ಅಲ್ಲ, ಅಘೋಷಿತ ತುರ್ತು ಪರಿಸ್ಥಿತಿ ಎಂದು ಬಣ್ಣಿಸಿದ್ದಾರೆ. ಮುಖ್ಯಮಂತ್ರಿ ಭೂಪೇಶ್‌ ಭಗೇಲ್‌ ಕೂಡ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ.

ಸಮಿತಿಗಳಲ್ಲಿ ಯುವಕರಿಗೆ ಆದ್ಯತೆ?
ಕಾಂಗ್ರೆಸ್‌ ಮಹಾಧಿವೇಶನದಲ್ಲಿ ಪಕ್ಷದ ವಿವಿಧ ಸಮಿತಿಗಳಲ್ಲಿ ಶೇ.75ರಷ್ಟು ಹುದ್ದೆಗಳನ್ನು ಯುವಕರಿಗೆ ಅಂದರೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಉದಯಪುರದಲ್ಲಿ ನಡೆದಿದ್ದ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದ ತೀರ್ಮಾನ ಪರಿಷ್ಕರಿಸಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವಿವಿಧ ಸಮಿತಿಗಳಲ್ಲಿ ಶೇ.50 ಹುದ್ದೆಗಳನ್ನು ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಮೀಸಲಾಗಿ ನೀಡುವ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ. ಮಹಿಳೆಯರ ನೇಮಕದಲ್ಲೂ 50 ವರ್ಷಕ್ಕಿಂತ ಕೆಳಗಿನವರಿಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next