ನವದೆಹಲಿ:ದೆಹಲಿಯ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶುಕ್ರವಾರ (ಸೆಪ್ಟೆಂಬರ್ 16) ಮಂಗಳೂರು, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ ದೇಶದ 40 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಳೆಯಲಿ ಡಾಲಿ ಜೊತೆಯಲಿ: ಮಾನ್ಸೂನ್ ನಲ್ಲಿ ಧನಂಜಯ್ ಕನಸು
ಸೆಪ್ಟೆಂಬರ್ 6ರಂದು ಜಾರಿ ನಿರ್ದೇಶನಾಲಯ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿದಂತೆ 35 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ದೆಹಲಿಯಲ್ಲಿ ಆಪ್ ಸರ್ಕಾರ ಜಾರಿಗೊಳಿಸಿದ ನೂತನ ಮದ್ಯ ನೀತಿಯ ಕರಡು ತಯಾರಿಕೆಯಲ್ಲಿ ಭಾಗಿಯಾದ ತಯಾರಕರು ಮತ್ತು ಮದ್ಯ ವ್ಯಾಪಾರದಲ್ಲಿ ತೊಡಗಿರುವವರ ಕಚೇರಿ, ಶಾಪ್ ಗಳ ಮೇಲೆ ದಾಳಿ ನಡೆದಿತ್ತು.
2021ರ ನವೆಂಬರ್ ನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ನೂತನ ದೆಹಲಿ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ನೂತನ ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿತ್ತು. ವಿವಾದಕ್ಕೆಡೆ ಮಾಡಿಕೊಟ್ಟ ನಂತರ ಆಪ್ ಸರ್ಕಾರ ನೂತನ ಅಬಕಾರಿ ನೀತಿಯನ್ನು ಹಿಂಪಡೆದಿತ್ತು.
ಮದ್ಯ ನೀತಿ ಪ್ರಕರಣದ ಕುರಿತು ಸಿಬಿಐ ದಾಖಲಿಸಿದ ಎಫ್ ಐಆರ್ ಆಧಾರದ ಮೇಲೆ ಇ.ಡಿ ತನಿಖೆ ನಡೆಸಲು ಆರಂಭಿಸಿತ್ತು. ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಕೆಲವು ಅಧಿಕಾರಿಗಳ ಮೇಲೆ ಎಫ್ ಐಆರ್ ದಾಖಲಿಸಿತ್ತು.