ನವದೆಹಲಿ: ಯೆಸ್ ಬ್ಯಾಂಕ್ ಪ್ರಕರಣ ಸಂಬಂಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಿಯಾಂಕಾ ವಾಧ್ರಾರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಪ್ರಿಯಾಂಕರಿಂದ 2 ಕೋಟಿ ರೂ. ಮೌಲ್ಯದ ಅಪರೂಪದ ಕಲಾಕೃತಿ ಖರೀದಿಸಿದ್ದಾಗಿ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇ.ಡಿ. ಪ್ರಿಯಾಂಕಾರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ದಕ್ಷಿಣ ಮುಂಬೈನ ಮಾಜಿ ಸಂಸದ ಮಿಲಿಂದ್ ದೇವ್ರಾ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಚಿತ್ರವನ್ನು ಪ್ರಿಯಾಂಕಾ ವಾಧ್ರಾರಿಂದ 2 ಕೋಟಿ ರೂ. ನೀಡಿ ಖರೀದಿಸುವಂತೆ ಬಲವಂತ ಮಾಡಿದ್ದು, ಅದನ್ನು ಒಪ್ಪಿಕೊಳ್ಳಲೇಬೇಕಾಯಿತು ಎಂದು ರಾಣಾ ವಿಚಾರಣೆ ವೇಳೆ ಹೇಳಿದ್ದಾರೆ. ಆ 2 ಕೋಟಿ ರೂ. ಮೊತ್ತವನ್ನು ಪ್ರಿಯಾಂಕಾ ವಾಧ್ರಾ ಶಿಮ್ಲಾದಲ್ಲಿರುವ ಕಾಟೇಜ್‌ಗೆ ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಎಂ.ಎಫ್.ಹುಸೇನ್ ವಿರಚಿತ ಈ ವರ್ಣಚಿತ್ರವನ್ನು ಕಪೂರ್‌ಗೆ ಮಾರಾಟ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲವೆಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಪಾವತಿಗೆ ಅವಕಾಶ: ಯೆಸ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್, ಸಾಲ ಮರು ಪಾವತಿ ಬಗ್ಗೆ ಗ್ರಾಹಕರು ಇತರ ಬ್ಯಾಂಕ್‌ಗಳ ಮೂಲಕ ಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜತೆಗೆ ಇಮ್ಮಿಡಿಯೆಟ್ ಮೊಬೈಲ್ ಪೇಮೆಂಟ್ ಸರ್ವಿಸ್ (ಐಪಿಎಂಪಿಎಸ್), ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (ಎನ್‌ಇಎಫ್ಟಿ) ಮೂಲಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.
ವಾರದಲ್ಲಿ ಸಲ್ಲಿಕೆ: ಯೆಸ್ ಬ್ಯಾಂಕ್ ಷೇರುಗಳನ್ನು ಖರೀದಿ ಮಾಡುವ ಬಗೆಗಿನ ಸಮಗ್ರ ದಿಕ್ಸೂಚಿ ಯೋಜನೆಯನ್ನು ಎಸ್‌ಬಿಐ ಶೀಘ್ರವೇ ಆರ್‌ಬಿಐಗೆ ಸಲ್ಲಿಸಲಿದೆ. ಅದರ ಅನುಸಾರ 6 ಸಾವಿರ ಕೋಟಿ ರೂ. ಮೊತ್ತದ ಮೂಲಕ ಶೇ.26ರಷ್ಟು ಷೇರು ಖರೀದಿ, ಜಾಗತಿಕ ಹೂಡಿಕೆದಾರರ ಮೂಲಕ 5 ಸಾವಿರ ಕೋಟಿ ರೂ. ಸಂಗ್ರಹಿಸಿ ಅವರಿಗೆ ಶೇ.23ರಷ್ಟು ಷೇರು, 8-10 ಸಾವಿರ ಕೋಟಿ ರೂ. ಮೊತ್ತವನ್ನು ಯೆಸ್ ಬ್ಯಾಂಕ್‌ನ ಸೆಕ್ಯುರಿಟಿಗಾಗಿ ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆ.