ತುಮಕೂರು: ಸೆ.24ನೇ ತಾರೀಖು ನನಗೆ ಇ.ಡಿ.ಯಿಂದ ನೋಟಿಸ್ ಬಂದಿದೆ. ಅ.8ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಂಬಂಧ ಇ-ಮೇಲ್ ಮೂಲಕ ಮಾಹಿತಿ ತರಿಸಿ ಕೊಂಡಿದ್ದೇನೆ. ಯಾವ ಕೇಸು, ಯಾವ ದಾಖಲೆ ಎನ್ನುವುದು ನನಗೆ ಮಾಹಿತಿ ಇಲ್ಲ.
ತುಮಕೂರು ಡಿಸಿಸಿ ಬ್ಯಾಂಕಿನಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ ಗೆ 25 ಕೋಟಿ ರೂ. ಸಾಲ ಕೊಟ್ಟಿದ್ದೇವೆ. ಈ ಸಂಬಂಧ ಮಾಹಿತಿಗಾಗಿ ಈ ನೋಟಿಸ್ ಬಂದಿರಬಹುದು ಎಂದು ಕೆ.ಎನ್ ರಾಜಣ್ಣ ತಿಳಿಸಿದ್ದಾರೆ. ಆದರೆ ಅ.8ರಂದು ದಸರಾ ಹಬ್ಬ ಇರುವುದರಿಂದ 9ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ಪರಂ ಡಿಸಿಎಂ ಆಗಿದ್ದಾಗ ಯಾಕೆ ಮಧುಗಿರಿ ಜಿಲ್ಲೆ ಮಾಡಲಿಲ್ಲ?: “ಪರಮೇಶ್ವರ್ ಡಿಸಿಎಂ ಆಗಿದ್ದಾಗ ಯಾಕೆ ಮಧುಗಿರಿ ಜಿಲ್ಲೆ ಮಾಡಿಲ್ಲ? ಡಿಸಿಎಂ ಆಗಿದ್ರು, ಜಿಲ್ಲಾ ಉಸ್ತುವಾರಿಯಾಗಿದ್ದರು. ಎಲ್ಲಾ ಅಧಿಕಾರ ಇದ್ದಾಗ, ಮಾಡದೇ ಇದ್ದವರು ಈಗ ಜಿಲ್ಲೆ ಮಾಡಿ ಎನ್ನಲು ಅವರಿಗೆ ನೈತಿಕತೆ ಇಲ್ಲ’ ಎಂದು ರಾಜಣ್ಣ ಹರಿಹಾಯ್ದರು. ಚುನಾವಣಾ ಪ್ರಣಾಳಿಕೆಯಲ್ಲಿ ಮಧುಗಿರಿ ಜಿಲ್ಲೆ ಮಾಡುವ ಪ್ರಸ್ತಾಪ ಇತ್ತು. ಪಿಡಬ್ಲ್ಯುಡಿ ವಿಭಾಗ, ಆರ್‌ಟಿಒ ಇದೆ, ಶೈಕ್ಷಣಿಕ ಜಿಲ್ಲೆ ಆಗಿದೆ.
ಎಸ್ಪಿ ಮತ್ತು ಡೀಸಿ ಕಚೇರಿ ಹೊರತುಪಡಿಸಿದರೆ ಮಧುಗಿರಿಯಲ್ಲಿ ಜಿಲ್ಲಾಮಟ್ಟದ ಎಲ್ಲಾ ಕಚೇರಿಗಳಿವೆ ಎಂದರು. ಆ ಮನುಷ್ಯನೇ ತೀರ್ಮಾನ ತೆಗೆದುಕೊಳ್ಳುವಾಗ ಮಾಡಲಿಲ್ಲ. ಈಗ ತಾನು ಏನೋ ಮಾಡೋಕೆ ಹೊರಟಿದ್ದೇನೆಂದು ತೋರಿಸಿಕೊಳ್ಳಲು ಪತ್ರ ಬರೆದಿದ್ದಾರೆ ಎಂದು ಪರಮೇಶ್ವರ್ ವಿರುದ್ಧ ಹರಿಹಾಯ್ದರು.ಮಧುಗಿರಿ ಜಿಲ್ಲೆ ಮಾಡಲು ನಾನೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.