ಬೆಂಗಳೂರು: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಡಿ ವಿಚಾರಣೆ ನಡೆಸುತ್ತಿದೆ. ”ಬಿಜೆಪಿ ಎಲ್ಲಾ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ತನ್ನ ರಾಜಕೀಯ ಸೇಡನ್ನು ಮುಂದುವರೆಸಿದೆ” ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಗುರುವಾರ ಟ್ವೀಟ್ ಮಾಡಿರುವ ಅವರು, ”ಇ ಡಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ನೀಡಿದೆ. ಇದು ಸಂಸತ್ತಿನ ಅಧಿವೇಶನವನ್ನು ಅಡ್ಡಿಪಡಿಸಲು ಮತ್ತು ಅವರ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯ ತಂತ್ರವಾಗಿದೆ” ಎಂದು ಬರೆದಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಖರ್ಗೆ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಸುದೀರ್ಘ ವಿಚಾರಣೆ ನಡೆಸುತ್ತಿದೆ.
ತೆರಿಗೆ ವಂಚನೆ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಿರುವ ಇ ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಮುಂದೆ ಹಾಜರಾಗುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ನೀಡಿದೆ.
ಖರ್ಗೆ ಅವರನ್ನು ಕಳೆದ ನಾಲ್ಕೂವರೆ ಗಂಟೆಗಳಿಂದ ಇಡಿ ವಿಚಾರಣೆ ನಡೆಸುತ್ತಿದೆ. ಸಂಪೂರ್ಣ ಕಾಂಗ್ರೆಸ್ ಪಕ್ಷ ಅವರ ಜತೆ ಒಗ್ಗಟ್ಟಿನಿಂದ ನಿಂತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.