ನವದೆಹಲಿ: ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆದ ವೇಳೆ ಸಂಭವಿಸಿದ ಹಿಂಸಾಚಾರದ ಘಟನೆ ಹಿಂದೆ ಕೇರಳ ಮೂಲದ ಪಿಎಫ್ ಐ ಸಂಘಟನೆಯ ಆರ್ಥಿಕ ನಂಟು ಹೊಂದಿರುವುದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿರುವುದಾಗಿ ಮೂಲಗಳು ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
2018ರಿಂದ ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ ಎ) ಅಡಿ ಜಾರಿ ನಿರ್ದೇಶನಾಲಯ ಪಿಎಫ್ ಐ ವಿರುದ್ಧ ತನಿಖೆ ನಡೆಸುತ್ತಿತ್ತು. ಈ ವೇಳೆ ಕಳೆದ ವರ್ಷ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಿಎಎ ಮಸೂದೆ ಅಂಗೀಕಾರಗೊಂಡ ನಂತರ ಉತ್ತರಪ್ರದೇಶದ ಬ್ಯಾಂಕ್ ಖಾತೆಯಲ್ಲಿ 120 ಕೋಟಿ ರೂಪಾಯಿ ಹಣವನ್ನು ಠೇವಣಿ ಇಟ್ಟಿರುವುದು ಪತ್ತೆಯಾಗಿರುವುದಾಗಿ ತಿಳಿಸಿದೆ.
ಈ ಹಣ ಇತ್ತೀಚೆಗೆ ಉತ್ತರಪ್ರದೇಶದ ವಿವಿಧೆಡೆ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಿಎಫ್ ಐ ಅಂಗ ಸಂಸ್ಥೆಗಳು ಬಳಸಿಕೊಂಡಿರುವ ಸಾಧ್ಯತೆ ಇದ್ದಿರುವುದಾಗಿ ಇ.ಡಿ. ಅಧಿಕಾರಿಗಳು ಶಂಕಿಸಿರುವುದಾಗಿ ವರದಿ ವಿವರಿಸಿದೆ.
ಪಿಎಫ್ ಐ ಖಾತೆಯಲ್ಲಿ 120 ಕೋಟಿ ರೂಪಾಯಿ ಹಣ ಠೇವಣಿ ಇಟ್ಟಿರುವುದನ್ನು ಪತ್ತೆ ಹಚ್ಚಿರುವ ಕುರಿತು ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ತರಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರ ಘಟನೆಯಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದರು.