Advertisement

ಇ.ಡಿ.ದಾಳಿ ಪ್ರಮಾಣ ಶೇ.27ರಷ್ಟು ಹೆಚ್ಚಳ; 2014ರಿಂದ 2022ರ ವರೆಗೆ 3,010 ದಾಳಿ

06:59 PM Sep 11, 2022 | Team Udayavani |

ನವದೆಹಲಿ: ದೇಶದಲ್ಲಿ ಆರ್ಥಿಕ ಅಪರಾಧಗಳ ಬಗ್ಗೆ ವಿಶೇಷವಾಗಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ದಾಳಿಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ.

Advertisement

ಜತೆಗೆ ಈ ದಾಳಿಗಳ ವೇಳೆ 1 ಲಕ್ಷ ಕೋಟಿ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದೆ. 2004ರಿಂದ 2014ರ ವರೆಗೆ ಇ.ಡಿ. ಕೇವಲ 112 ದಾಳಿಗಳನ್ನು ನಡೆಸಿದ್ದರೆ, 2014ರಿಂದ 2022ರವರೆಗೆ 3,010 ದಾಳಿಗಳನ್ನು ನಡೆಸಲಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 27ರಷ್ಟು ಹೆಚ್ಚಾಗಿದೆ.

ಕೋಲ್ಕತಾದ ಮೊಬೈಲ್‌ ಗೇಮಿಂಗ್‌ ಆ್ಯಪ್‌ ವ್ಯಾಪಾರಿಯ ನಿವಾಸ ಮತ್ತು ಇತರ ಸ್ಥಳಗಳ ಮೇಲೆ ಶನಿವಾರ ನಡೆಸಲಾಗಿದ್ದ ದಾಳಿಯ ವೇಳೆ 17 ಕೋಟಿ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕ ಹಗರಣಕ್ಕೆ ಸಂಬಂಧಿಸಿ ಟಿಎಂಸಿ ಶಾಸಕ ಪಾರ್ಥ ಚಟರ್ಜಿ ನಿವಾಸ-ಕಚೇರಿಗಳ ಮೇಲೆ ದಾಳಿ ನಡೆಸಿದ್ದಾಗ 27 ಕೋಟಿ ರೂ. ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಜಾರ್ಖಂಡ್‌ನ‌ಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದಿದ್ದ ಹಗರಣದ ವೇಳೆ ಐಎಎಸ್‌ ಅಧಿಕಾರಿ ಪೂಜಾ ಸಿಂಘಲ್‌ ನಿವಾಸದಲ್ಲಿ 20 ಕೋಟಿ ರೂ. ಪತ್ತೆಯಾಗಿತ್ತು.

ಕಳೆದ ಮಾ.31ಕ್ಕೆ ಜಾರಿ ನಿರ್ದೇಶನಾಲಯದ ವಶದಲ್ಲಿ 1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಇತ್ತು. ಅವುಗಳೆಲ್ಲವೂ ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡದ್ದು. ಜಪ್ತಿ ಮಾಡಲಾಗಿರುವ ಆಸ್ತಿಯ ಪೈಕಿ 57 ಸಾವಿರ ಕೋಟಿ ರೂ. ಮೌಲ್ಯದ್ದು ಬ್ಯಾಂಕ್‌ ವಂಚನೆ ಮತ್ತು ಹಣಕಾಸು ವಂಚನೆ ಪ್ರಕರಣಗಳಿಗೆ ಸೇರಿವೆ.

ಏನಾಗಲಿದೆ ವಶಪಡಿಸಿಕೊಳ್ಳಲಾದ ಹಣ?
ವಶಪಡಿಸಿಕೊಂಡ ನಗದು, ಆಭರಣ ಸೇರಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಆಸ್ತಿಯ ಬಗ್ಗೆ ಪಂಚನಾಮೆ ನಡೆಸಲಾಗುತ್ತದೆ. ಅಂದರೆ ಅವುಗಳ ಸಂಪೂರ್ಣ ವಿವರಗಳು ಅದರಲ್ಲಿರುತ್ತವೆ. ನಗದು ಮೊತ್ತವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿರುವ ತನಿಖಾ ಸಂಸ್ಥೆಯ ಖಾತೆಯಲ್ಲಿ ಇರಿಸಲಾಗುತ್ತದೆ. ಸಾಕ್ಷಿಯಾಗಿ ಪರಿಗಣಿತವಾಗಿರುವ ನಗದು ಅಥವಾ ಚಿನ್ನವನ್ನು ಕೋರ್ಟ್‌ನಲ್ಲಿ ಸಾಕ್ಷ್ಯ ರೂಪದಲ್ಲಿ ಹಾಜರುಪಡಿಸಬೇಕಾಗಿರುವುದರಿಂದ ಅದನ್ನು ಮೊಹರು ಮಾಡಿ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next