ತಿರುವನಂತಪುರಂ: ಕೇರಳದ ಮುಖ್ಯಮಂತ್ರಿಗಳ ಕಛೇರಿಯ ಮಾಜಿ ಮುಖ್ಯ ಕಾರ್ಯದರ್ಶಿ, ಎಂ. ಶಿವಶಂಕರ್ ಅವರನ್ನು ಇ.ಡಿ ಅಧಿಕಾರಿಗಳು LIFE ಮಿಷನ್ ಯೋಜನೆಯ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.
LIFE ಮಿಷನ್ ಯೋಜನೆಯ ಹಗರಣಕ್ಕೆ ಸಂಬಂಧಿಸಿದ ಮೊದಲ ಬಂಧನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಸರ್ಕಾರ ಪ್ರಾರಂಭಿಸಿದ್ದ ಮಹತ್ವಾಕಾಂಕ್ಷಿ LIFE ಮಿಷನ್ ಯೋಜನೆಯು, ತ್ರಿಶ್ಶೂರ್ ಜಿಲ್ಲೆಯ ವಡಕ್ಕಂಚೇರಿ ಭಾಗದಲ್ಲಿ 140 ಕುಟುಂಬಗಳಿಗೆ 14.50 ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವ ಯೋಜನೆಯಾಗಿತ್ತು. ಬೇರೆ ಬೇರೆ ಯೋಜನೆಗಳಿಗಾಗಿ ಯುಎಇ ಮೂಲದ ರೆಡ್ ಕ್ರೆಸೆಂಟ್ ಅನ್ನುವ ಕನ್ಸಲ್ಟೆನ್ಸಿ ಬಿಡುಗಡೆಗೊಳಿಸಿದ್ದ 18.50 ಕೋಟಿ ರೂ.ನಲ್ಲಿ LIFE ಮಿಷನ್ ಯೋಜನೆಯೂ ಒಂದು ಭಾಗವಾಗಿತ್ತು.
ಉಳಿದ ಮೊತ್ತದಲ್ಲಿ ಹೆಲ್ತ್ ಕೇರ್ ಸೆಂಟರ್ ಪ್ರಾರಂಭಿಸುವ ಉದ್ದೇಶವೂ ಇತ್ತು. ಆದರೆ ಎಂ. ಶಿವಶಂಕರ್, ಸ್ವಪ್ನಾ ಸುರೇಶ್ ಮತ್ತಿತರರು ಯೋಜನೆಗಾಗಿ ಸುಮಾರು 4.48 ಕೋಟಿ ರೂ. ಲಂಚ ಕೇಳಿದ್ದರು ಎಂದು UNITAC ಎಂಡಿ ಸಂತೋಷ್ ಏಪನ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ವಿಚಾರಣೆ ವೇಳೆ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸರಿತ್ ಪಿ.ಎಸ್ ಅವರು ಎಂ. ಶಿವಶಂಕರ್ ಅವರು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದೀಗ ಇ.ಡಿ ಅಧಿಕಾರಿಗಳು ಎಂ. ಶಿವಶಂಕರ್ ಅವರನ್ನು ಬಂಧಿಸಿದ್ದಾರೆ.
ಕೇರಳ ರಾಜಕೀಯದಲ್ಲಿ ಧೂಳೆಬ್ಬಿಸಿದ್ದ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಎಂ. ಶಿವಶಂಕರ್ ಅವರ ಪತ್ನಿ ಎಂಬುದು ಮಹತ್ವದ ಸಂಗತಿ. ಇದೀಗ ಆರೋಪಿ ಎಂ.ಶಿವಶಂಕರ್ ಅವರನ್ನು ಬಂಧಿಸಿರುವ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.