ಹೊಸದಿಲ್ಲಿ : ಈ ವರ್ಷ ದೇಶವು ಶೇ.7.2ರ ಆರ್ಥಿಕಾಭಿವೃದ್ಧಿಯನ್ನು ಸಾಧಿಸಲಿದೆ; 2018ರಲ್ಲಿ ದೇಶದ ಆರ್ಥಿಕಾಭಿವೃದ್ಧಿಯು ಶೇ.7.7ರ ಪ್ರಮಾಣದಲ್ಲಿ ದಾಖಲಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದಿಲ್ಲಿಯಲ್ಲಿಂದು ಏರ್ಪಟ್ಟಿರುವ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ನ ಎರಡನೇ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಜೇತ್ಲಿ ಮಾತನಾಡುತ್ತಿದ್ದರು.
ಜಾಗತಿಕ ಆರ್ಥಿಕ ಬೆಳವಣಿಗೆಯು ಧನಾತ್ಮಕ ಸೂಚನೆಗಳನ್ನು ನೀಡುತ್ತಿದ್ದು ಅದು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಹಾಗಿದ್ದರೂ ಅದು 2017-18ರಲ್ಲಿ ಇನ್ನಷ್ಟು ಬೆಳವಣಿಗೆಯನ್ನು ಕಾಣಲಿದೆ. ವಿಶ್ವದ ಉದಯೋನ್ಮುಖ ಆರ್ಥಿಕ ಶಕ್ತಿಗಳಾಗಿ ಮೂಡಿಬರುತ್ತಿರುವ ಭಾರತದಂತಹ ದೇಶಗಳಿಗೆ ಮುಂದಿನ ವರ್ಷಗಳು ಹೆಚ್ಚು ಸವಾಲಿನಿಂದ ಕೂಡಿವೆ. ರಕ್ಷಣಾತ್ಮಕ ಆರ್ಥಿಕ ನೀತಿಗಳು ಹಾಗೂ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಹೆಚ್ಚುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಜೇಟ್ಲಿ ಹೇಳಿದರು.
ನ್ಯೂಡೆವಲಪ್‌ಮೆಂಟ್ ಬ್ಯಾಂಕ್ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಸಾಧನೆಯ ಬ್ಯಾಂಕ್ ಆಗಿ ಮೂಡಿ ಬರಬೇಕು ಮತ್ತು ಉದಯೋನ್ಮುಖ ಆರ್ಥಿಕ ಶಕ್ತಿಗಳಿಗೆ ನೆರವಾಗಬೇಕು ಎಂದು ಜೇಟ್ಲಿ ಹೇಳಿದರು.
ಭಾರತ, ಬ್ರಝಿಲ್, ಚೀನ, ರಶ್ಯ ಮತ್ತು ದಕ್ಷಿಣ ಆಫ್ರಿಕ ದೇಶಗಳು ಒಟ್ಟು ಸೇರಿ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಸ್ಥಾಪಿಸಿವೆ.